ಹಬ್ಬದ ಸಂದರ್ಭದಲ್ಲಿ ದುಪ್ಪಟ್ಟು ದರ ಕೇಳಿದರೆ ಬಸ್‌ ಪರ್ಮಿಟ್‌ ರದ್ದು..!

By Kannadaprabha NewsFirst Published Sep 30, 2022, 12:30 AM IST
Highlights

ಸಾರಿಗೆ ಇಲಾಖೆ ಅಧಿಕಾರಿಗಳ ಎಚ್ಚರಿಕೆ, ಹಬ್ಬದ ವೇಳೆ ಸುಲಿಗೆ ಮಾಡುವ ಬಸ್‌ಗಳ ಪತ್ತೆಗೆ 10 ವಿಶೇಷ ತಂಡ

ಬೆಂಗಳೂರು(ಸೆ.30):  ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಿದರೆ ವಾಹನ ಪರವಾನಗಿ ರದ್ದು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜತೆಗೆ ದರ ಹೆಚ್ಚು ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಸಾರ್ವಜನಿಕರು ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಲಾಗಿದೆ. ಹೆಚ್ಚು ಟಿಕೆಟ್‌ ದರ ಕೇಳಿದರೆ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಬಸ್‌ ನಂಬರ್‌, ಮಾರ್ಗ ತಿಳಿಸಿ ದೂರು ನೀಡಬಹುದು.

ಪ್ರಯಾಣ ದರ ಹೆಚ್ಚಳ ದೂರಿನ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್‌ ಮಾತನಾಡಿ, ಗಾಂಧಿ ಜಯಂತಿ, ವಿಜಯ ದಶಮಿ ಸೇರಿದಂತೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇದರ ದುರುಪಯೋಗ ಪಡೆದು ದುಬಾರಿ ಪ್ರಯಾಣ ದರ ವಿಧಿಸುತ್ತಿರುವುದು ಕೇಳಿಬರುತ್ತಿದೆ. ಯಾವುದೇ ಕಾರಣಕ್ಕೂ ದುಬಾರಿ ದರ ವಿಧಿಸಬಾರದು. ಪ್ರಯಾಣಿಕರಿಂದ ಬೇಕಾಬಿಟ್ಟಿದರ ವಸೂಲು ಮಾಡುವುದಕ್ಕೆ ಕಡಿವಾಣ ಹಾಕಲು ಈ ತಂಡಗಳನ್ನು ಮಾಡಿದ್ದು, ನಗರದ ಕಲಾಸಿಪಾಳ್ಯ ಬಸ್‌ ನಿಲ್ದಾಣ, ಮೆಜೆಸ್ಟಿಕ್‌ ಮತ್ತು ಸುತ್ತಲಿನ ಪ್ರದೇಶ, ಶಾಂತಿನಗರ, ಮೈಸೂರು ರಸ್ತೆ ಒಳಗೊಂಡಂತೆ ವಿವಿಧೆಡೆ ನಿಯೋಜನೆ ಮಾಡಲಾಗುತ್ತಿದೆ. ಗುರುವಾರ ಸಂಜೆಯಿಂದಲೇ ಕಾರ್ಯಾಚರಣೆಗಿಳಿಸಲಾಗುವುದು. ಅಕ್ಟೋಬರ್‌ 5ರವರೆಗೆ ನಿತ್ಯ ಸಂಜೆ 6ರಿಂದ ಈ ವಿಶೇಷ ತನಿಖಾ ತಂಡಗಳು ನಾನಾ ಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.

ಗಣೇಶ ಹಬ್ಬ: ಪ್ರಯಾಣಿಕರ ಸುಲಿಗೆಗಿಳಿದ ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ವಾರ್ನಿಂಗ್

ಪರವಾನಗಿ ರದ್ದು:

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಮಾರ್ಗಸೂಚಿಯಂತೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಕುರಿತು ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಮೇಲ್ವಿಚಾರಣೆಯಲ್ಲಿರುವ ಅಧಿಕಾರಿಗಳು ದಾಖಲಿಸಿದ ಪ್ರಕರಣಗಳ ವಿವರವನ್ನು ಅ. 7ರ ಒಳಗೆ ಕಚೇರಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ನಂತರ ತಪ್ಪಿತಸ್ಥರ ವಿರುದ್ಧ ನೋಟಿಸ್‌ ಜಾರಿ ಮಾಡಿ, ಲೈಸನ್ಸ್‌ ರದ್ದು ಮಾಡಲಾಗುವುದು ಎಂದು ಬೆಂಗಳೂರು ನಗರದ ಸಾರಿಗೆ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ ಎಚ್ಚರಿಸಿದ್ದಾರೆ.

ಹೆಚ್ಚು ದರ ಕೇಳಿದರೆ ಕರೆ ಮಾಡಿ

ದರ ಹೆಚ್ಚು ವಸೂಲಿ/ಪ್ರಯಾಣಿಕರಿಗೆ ಸಮಸ್ಯೆಯಾದಲ್ಲಿ ಮೊಬೈಲ್‌ ನಂಬರ್‌ 94498 63429/ 94498 63426 ಸಂಪರ್ಕಿಸಬಹುದು.
 

click me!