
ಬೆಂಗಳೂರು (ಏ.22): ‘ನಾನಂತೂ ನಮ್ಮ ಅಪ್ಪ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ. ಎಲ್ಲ ರೀತಿಯಲ್ಲೂ ನನ್ನಿಂದ ನನ್ನ ತಂದೆ, ತಾಯಿಗೆ ಕೆಟ್ಟದ್ದೇ ಆಗಿದೆ. ಈಗ ಹಂತ ಹಂತವಾಗಿ ಒಳ್ಳೆಯ ಹೆಸರು ತೆಗೆದುಕೊಳ್ಳಲು ಪ್ರಯತ್ನಿಸಿದರೂ ಆಗುತ್ತಿಲ್ಲ. ನಮ್ಮಪ್ಪ ಎನ್.ಎ.ಹ್ಯಾರಿಸ್ ಅವರು ಸಚಿವರಾಗುವುದನ್ನು ತಪ್ಪಿಸಲು ಇ.ಡಿ.(ಜಾರಿ ನಿರ್ದೇಶನಾಲಯ) ದಾಳಿ ನಡೆದಿದೆ. ಇದಕ್ಕೆ ನಾನು ನೆಪವಾಗಿದ್ದೇನೆ ಎಂದು ಯುವ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಇ.ಡಿ. ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದು ನೂರಕ್ಕೆ ನೂರರಷ್ಟು ರಾಜಕೀಯ ಪ್ರೇರಿತ ದಾಳಿ. ನಮ್ಮ ತಂದೆಯವರಿಗೆ ಸಚಿವ ಸ್ಥಾನ ತಪ್ಪಿಸಲು ಯಾರೋ ಷಡ್ಯಂತ್ರ ಮಾಡಿದ್ದಾರೆ. ಇದನ್ನು ನಾವು ಕೋರ್ಟ್‌ನಲ್ಲಿ ಎದುರಿಸುತ್ತೇವೆ. ಸತ್ಯಮೇವ ಜಯತೆ’ ಎಂದು ಹೇಳಿದರು.
ನಾನು ಹಾಗೂ ನನ್ನ ತಮ್ಮ ಎನ್.ಎ.ಹ್ಯಾರಿಸ್ ಅವರ ಮಕ್ಕಳು. ನಾವು ಈ ಮನೆಯಲ್ಲಿದ್ದೇವೆ ಎಂಬ ಕಾರಣಕ್ಕೆ ಇ.ಡಿ.ಯವರು ಈ ಮನೆಗೆ ಬಂದಿದ್ದಾರೆ ಅಷ್ಟೇ ಹೊರತು ಹ್ಯಾರಿಸ್ ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
2021ರ ಪ್ರಕರಣದಲ್ಲಿ ಆರು ವರ್ಷಗಳ ಬಳಿಕ ನಮ್ಮ ಮನೆ ಮೇಲೆ ರೇಡ್ ಮಾಡಿದ್ದಾರೆ. ಇದೇ ರೀತಿ ಆಗುತ್ತಿದ್ದರೆ ನಮ್ಮ ತಂದೆಯವರು ನಮ್ಮನ್ನು ಮನೆಯಿಂದ ಹೊರಗೆ ಹಾಕುತ್ತಾರೆ ಎಂದು ಭಾವುಕರಾದರು.
ಇ.ಡಿ. ದಾಳಿಯಲ್ಲಿ 37 ಲಕ್ಷ ರು. ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಒಂದೇ ಒಂದು ರುಪಾಯಿಯೂ ಸಿಕ್ಕಿಲ್ಲ. ಮಾಧ್ಯಮಗಳು ಈ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುವುದು ಬೇಡ. ನೀವು ಈ ರೀತಿ ಮಾಡಿದರೆ ನಮ್ಮ ಮನೆಯಲ್ಲಿರುವ ವಯಸ್ಸಾದ ಅಜ್ಜ, ನಮ್ಮ ತಾಯಿಯವರ ಪರಿಸ್ಥಿತಿ ಏನಾಗಬೇಡ ಎಂದು ನಲಪಾಡ್ ಪ್ರಶ್ನಿಸಿದರು.
ನಾನೇನು ಶ್ರೀಕಿ ಜತೆ ಸ್ನೇಹ ಇಲ್ಲ ಎಂದು ಹೇಳಿಲ್ಲ. ಆ ವ್ಯಕ್ತಿ ನನಗೆ ಹಾಗೂ ನನ್ನ ತಮ್ಮನಿಗೆ ಪರಿಚಯಸ್ಥ ಅಂದ ಮಾತ್ರಕ್ಕೆ ಅವರು ಮಾಡಿದ ತಪ್ಪಿಗೆ ನಾನು ಹೊಣೆಯಲ್ಲ. ಇದನ್ನು 2021ರಲ್ಲೂ ಇ.ಡಿ. ಮುಂದೆ ಹೇಳಿಕೆ ನೀಡಿದ್ದೇನೆ. ಈಗ ಪಿತೂರಿಯಿಂದ ದಾಳಿ ನಡೆದಿದೆ. ಯಾರಾದರೂ ಅಪರಾಧ ಮಾಡಿದವರು 6 ವರ್ಷದವರೆಗೆ ಮನೆಯಲ್ಲಿ ಸಾಕ್ಷ್ಯ ಇಟ್ಟುಕೊಂಡು ಇರುತ್ತಾರಾ? ಈ ಷಡ್ಯಂತ್ರದ ದಾಳಿಯನ್ನು ನ್ಯಾಯಾಲಯದಲ್ಲಿ ಎದುರಿಸುತ್ತೇನೆ ಎಂದು ನಲಪಾಡ್ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಭಾರೀ ಸುದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಸಂಬಂಧ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್, ಹ್ಯಾಕರ್ ಶ್ರೀಕಿ, ಹಕೀಬ್ ಖಾನ್ ಮನೆ, ಕಚೇರಿ ಸೇರಿದಂತೆ 12 ಸ್ಥಳಗಳಲ್ಲಿ ಸೋಮವಾರ ಏಕಕಾಲಕ್ಕೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಮಂಗಳವಾರ ಸಂಜೆ, 24 ತಾಸಿನ ಬಳಿಕ ಶೋಧ ಕಾರ್ಯ ಅಂತ್ಯಗೊಳಿಸಿದರು.
ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ರಚಿಸಲಾಗಿರುವ ಎಸ್‌ಐಟಿ ತಂಡದ ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿರುವ ಪ್ರಕರಣಗಳಲ್ಲಿ ಮಾಹಿತಿ ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಸದ್ಯ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಲಾಗಿದೆ.
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ