
ಬೆಂಗಳೂರು (ಏ.22): ಪ್ರಧಾನಿ ಮೋದಿ ಅವರನ್ನು ಕುರಿತು ‘ಭಯೋತ್ಪಾದಕ’ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಖರ್ಗೆ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಬಲವಾಗಿ ಖಂಡಿಸಿದ್ದಾರೆ.
ಖರ್ಗೆ ಅವರೇ, ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ತೀರಾ ಕೀಳುಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿ ಅನಾವರಣಗೊಳಿಸಿದೆ. ಹೆಮ್ಮೆಯ ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ.. ಭಾರತೀಯರಿಗೆ ಯಾರು ಭಯೋತ್ಪಾದಕರು, ಯಾರು ದೇಶ ಭಕ್ತರು ಎಂಬುದು ತಿಳಿದಿದೆ. ಮೋದಿ ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಅವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ. ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನ ನಿಮಗೆ ಪಾಠ ಕಲಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ಹಿರಿಯರಾಗಿ, ಹಲವಾರು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರೂ, ನಿಮ್ಮ ನೇತೃತ್ವ ತೃಪ್ತಿಪಡಿಸಲು ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ಜನ ಕೂಡ ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಅವಹೇಳನಕಾರಿ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ಅವರು ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ಇರುವವರು, ಹಿರಿತನ ಹೊಂದಿರುವವರು ಬಳಸುವ ಭಾಷೆ ನೋಡಿದರೆ ಅಸಹ್ಯವಾಗುತ್ತದೆ. ಭಾರತೀಯರಿಗೆ ಇದು ಅವಮಾನ. ಖರ್ಗೆ ಅವರು ಈ ಹಿಂದೆಯೂ ಮೋದಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುವುದು ನಂತರ ವಿಷಾದ ವ್ಯಕ್ತಪಡಿಸುವುದು ಅವರ ಅನುಭವಕ್ಕೆ ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನ ಮುಂದೆ ಸರಿಯಾದ ಪಾಠ ಕಲಿಸಲಿದ್ದಾರೆ. ಪಕ್ಷಕ್ಕೆ ಬಹಿಷ್ಕಾರ ಹಾಕುವ ದಿನ ದೂರವಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ ಕಿಡಿಕಾರಿದ್ದಾರೆ.
ಎಐಸಿಸಿ ಅಧ್ಯಕ್ಷರ ಹೇಳಿಕೆಯನ್ನು ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಮೋದಿ ಅವರು ಭಯೋತ್ಪಾದಕ ಆಗಿದ್ದರೆ ಇಷ್ಟೊಂದು ಜನ ಬಿಜೆಪಿಗೆ ಮತ ಹಾಕುತ್ತಿರಲಿಲ್ಲ. ಎನ್‌ಡಿಎ ಬೆಂಬಲಿಸುತ್ತಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡುವ ಮೂಲಕ ದೇಶ ಕೋಟ್ಯಂತರ ಜನರಿಗೆ ಅಪಮಾನ ಮಾಡಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷ ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ರವಿಕುಮಾರ್ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ