
ಬೆಂಗಳೂರು: 'ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ 2026' ರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಜೀವನದಲ್ಲಿ ಎದುರಿಸಿದ ಜಾತಿ ತಾರತಮ್ಯದ ಕಹಿ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಕಳೆದ ಮಂಗಳವಾರ (ಮಾ.24) ಕರ್ನಾಟಕ ವಿಧಾನ ಪರಿಷತ್ ಅಧಿವೇಶನವು ಅತ್ಯಂತ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪರಿಷತ್ತಿನ ಚರ್ಚೆಯ ವೇಳೆ ತಮ್ಮ ವೈಯಕ್ತಿಕ ಬದುಕಿನ ನೋವನ್ನು ಹಂಚಿಕೊಂಡ ಛಲವಾದಿ ನಾರಾಯಣಸ್ವಾಮಿ, 'ನಾನು ಇವತ್ತಿನವರೆಗೂ ಕ್ಷೌರ ಅಥವಾ ಶೇವಿಂಗ್ ಮಾಡಿಸಿಕೊಳ್ಳಲು ಯಾರ ಬಳಿಯೂ ಹೋಗುವುದಿಲ್ಲ. ನಾನೇ ಮಾಡಿಕೊಳ್ಳುತ್ತೇನೆ. ಯಾಕೆಂದರೆ, ಹಿಂದೆ ನಾನು ಕಟಿಂಗ್ ಶಾಪ್‌ಗೆ ಹೋದಾಗ ನನ್ನ ಜಾತಿಯ ಕಾರಣಕ್ಕೆ ನನ್ನನ್ನು ಬೈದು ಹೊರಹಾಕಿದ್ದರು. ಆ ದಿನ ನನಗೆ ಆದ ಅವಮಾನ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅಂದಿನಿಂದ ಇಂದಿನವರೆಗೆ ನಾನು ಎಲ್ಲೂ ಕ್ಷೌರ ಮಾಡಿಸಿಲ್ಲ' ಎಂದು ಗದ್ಗದಿತರಾದರು. ಈ ಮಾತುಗಳು ಸದನದಲ್ಲಿದ್ದ ಎಲ್ಲರ ಗಮನ ಸೆಳೆದವು.
'ನಾನು ಹುಟ್ಟಿದ ಮೇಲೆ ನನಗೆ ತಿಳಿಯಿತು ಈ ಸಮಾಜದಲ್ಲಿ ಜಾತಿ ಎಂಬ ಪದ್ಧತಿ ಇದೆ ಎಂದು. ಇಂದಿಗೂ ನಾನು ನಮ್ಮೂರಿನ ದೇವಸ್ಥಾನವನ್ನೇ ನೋಡಿಲ್ಲ. ದೇವಸ್ಥಾನದ ಒಳಗೆ ನಮಗೆ ಪ್ರವೇಶವಿರಲಿಲ್ಲ. ಜಾತೀಯತೆ ಎನ್ನುವುದು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ನಾವು ಸಾಮಾನ್ಯವಾಗಿ ಬ್ರಾಹ್ಮಣರನ್ನು ಜಾತೀಯವಾದಿಗಳು ಎಂದು ಬೈಯುತ್ತೇವೆ. ಆದರೆ ವಾಸ್ತವದಲ್ಲಿ ಜಾತೀಯತೆ ಸಮಾಜದ ಎಲ್ಲಾ ಸ್ತರಗಳಲ್ಲೂ ಬೇರೂರಿದೆ. ನಾನು ಸ್ವಾಮೀಜಿಗಳನ್ನು ದ್ವೇಷ ಮಾಡುವುದಿಲ್ಲ, ಆದರೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಮಾರ್ಮಿಕವಾಗಿ ನುಡಿದರು.
ಇತ್ತೀಚೆಗೆ ಯಲ್ಲಾಪುರದಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. 'ಓರ್ವ ಮಹಿಳೆಯನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ವ್ಯಕ್ತಿ, ಆಕೆ ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ. ಇಂತಹ ಘಟನೆಗಳು ಸಮಾಜಕ್ಕೆ ಕಳಂಕ. ಈಗಿರುವ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿದೆ. 'ಇವ ನಮ್ಮವ ಇವ ನಮ್ಮವ' ಎಂಬ ಈ ವಿಧೇಯಕ ಕೇವಲ ಹೆಸರಿಗೆ ಸೀಮಿತವಾಗದೆ, ನೈಜವಾಗಿ ಮರ್ಯಾದಾ ಹತ್ಯೆ ಹಾಗೂ ದೌರ್ಜನ್ಯಗಳನ್ನು ತಡೆಯುವಂತಿರಬೇಕು' ಎಂದು ಆಗ್ರಹಿಸಿದರು.
2026ರ ಈ ವಿಧೇಯಕವು ವಿವಾಹದ ಆಯ್ಕೆಯಲ್ಲಿ ಯುವಜನತೆಗೆ ಸ್ವಾತಂತ್ರ್ಯ ನೀಡುವುದು ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯುವ ಉದ್ದೇಶ ಹೊಂದಿದೆ. ಈ ಬಗ್ಗೆ ಮಾತನಾಡಿದ ಛಲವಾದಿ, ಸಂಪ್ರದಾಯದ ಹೆಸರಿನಲ್ಲಿ ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡದು ಎಂದು ಪ್ರತಿಪಾದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ