211 ವರ್ಕ್‌ ಇನ್ಸ್​ಪೆಕ್ಟರ್‌ ಹುದ್ದೆ ರದ್ದುಪಡಿಸಿದ್ದ ಸರ್ಕಾರದ ಆದೇಶಕ್ಕೆ ತಡೆ, ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ?

Kannadaprabha News   | Kannada Prabha
Published : Mar 28, 2026, 10:44 AM IST
Karnataka HC Stays Govt Order Canceling 211 Work Inspector Posts Big Relief for Aspirants rav

ಸಾರಾಂಶ

2016ರ ಅಧಿಸೂಚನೆಯಂತೆ ಆಯ್ಕೆಯಾದ 211 ವರ್ಕ್‌ ಇನ್ಸ್​ಪೆಕ್ಟರ್‌ಗಳಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡದೆ, ಕೇವಲ ಸರ್ಕಾರಿ ಆದೇಶದಿಂದ ಕಾನೂನಾತ್ಮಕವಾಗಿ ರಚಿಸಿದ ವೃಂದವನ್ನು ರದ್ದುಪಡಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೆಂಗಳೂರು (ಮಾ.28) ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡದೆ ಕಾನೂನಾತ್ಮಕವಾಗಿ ರಚಿಸಿದ ವೃಂದ ನಿಯಮಗಳನ್ನು ಕೇವಲ ಸರ್ಕಾರಿ ಆದೇಶದಿಂದ ರದ್ದುಪಡಿಸಲಾಗದು ಎಂದು ಆದೇಶಿಸಿರುವ ಹೈಕೋರ್ಟ್, 2016ರ ಅಧಿಸೂಚನೆಯನ್ವಯ 211 ಕಾರ್ಯ ನಿರೀಕ್ಷಕರ (ವರ್ಕ್‌ ಇನ್ಸ್​ಪೆಕ್ಟರ್‌) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ (ಅರ್ಜಿದಾರ) ನೇಮಕಾತಿ ಆದೇಶ ಪತ್ರ ವಿತರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. 

ವರ್ಕ್‌ ಇನ್ಸ್​ಪೆಕ್ಟರ್‌ಗಳಾಗಿ ಆಯ್ಕೆಯಾಗಿದ್ದ ಎಚ್‌.ಪಿ.ಹರೀಶ್‌ ಕುಮಾರ್‌, ವಿಶ್ವನಾಥ್‌ ಮತ್ತು ಹಂಪಣ್ಣ ಕೊಲಾಕರ್ ಎಂಬುವವರು ತಮಗೆ ನೇಮಕಾತಿ ಆದೇಶ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸರ್ಕಾರದ ನೀತಿ ನಿರ್ಧಾರದ ಭಾಗ:

ವರ್ಕ್‌ ಇನ್ಸ್​ಪೆಕ್ಟರ್‌ಗಳ ವೃಂದ ರದ್ದುಪಡಿಸಿ ಸರ್ಕಾರದ 2021ರಲ್ಲಿ ಹೊರಡಿಸಿರುವ ಆದೇಶ ಕೇವಲ ಸರ್ಕಾರದ ನೀತಿ ನಿರ್ಧಾರದ ಭಾಗವಾಗಿದೆ. ಆ ಕುರಿತು ಕಾನೂನಾತ್ಮಕವಾಗಿ ನಿಯಮಗಳಲ್ಲಿ ತಿದ್ದುಪಡಿ ಮಾಡುವವರೆಗೆ ಸರ್ಕಾರದ ಆದೇಶ ಜಾರಿಗೆ ಬರುವುದಿಲ್ಲ. ನಿಯಮಗಳಿಗೆ ತಿದ್ದುಪಡಿ ಆಗುವವರೆಗೆ ವರ್ಕ್ ಇನ್ಸ್​ಪೆಕ್ಟರ್‌ ಹುದ್ದೆಗಳ ವೃಂದ ಜಾರಿಯಲ್ಲಿರಲಿದೆ. ಹಾಗಾಗಿ, 2016ರ ಅಧಿಸೂಚನೆ ಮೇರೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ 211 ವರ್ಕ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ನೇಮಕಗೊಂಡಿರುವ ನೇಮಕಾತಿ ಆದೇಶ ವಿತರಿಸಬೇಕು. ಮುಂದಿನ ದಿನಗಳಲ್ಲಿ ವರ್ಕ್‌ ಇನ್ಸ್​ಪೆಕ್ಟರ್‌ ವೃಂದವನ್ನು ಕಾನೂನುಬದ್ಧವಾಗಿ ರದ್ದುಪಡಿಸಿದರೂ, ಅರ್ಜಿದಾರರನ್ನು ಸಮಾನ ಹುದ್ದೆಗಳಿಗೆ ವರ್ಗಾಯಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣವೇನು?:

ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ 211 ವರ್ಕ್‌ ಇನ್ಸ್​ಪೆಕ್ಟರ್‌ಗಳ ನೇಮಕಕ್ಕೆ ಸಂಬಂಧಿಸಿ ಪೌರಾಡಳಿತ ಇಲಾಖೆ ನಿರ್ದೇಶಕರ ಮನವಿ ಮೇರೆಗೆ ಕೆಪಿಎಸ್​ಸಿಯು 2016ರ ಏ.6ರಂದು ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ ನಂತರ 2017ರ ಸೆ.16ರಂದು ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ಈ ಪಟ್ಟಿಯಲ್ಲಿ ಅರ್ಜಿದಾರರು 4, 5 ಮತ್ತು 2ನೇ ಸ್ಥಾನ ಪಡೆದುಕೊಂಡಿದ್ದರು. ನೇಮಕಾತಿ ಆದೇಶ ಪತ್ರ ನೀಡುವ ಮುನ್ನವೇ 2021ರಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, 211ರ ವರ್ಕ್‌ ಇನ್ಸ್​ಪೆಕ್ಟರ್‌ಗಳ ವೃಂದ ರದ್ದುಗೊಳಿಸಿದ್ದರು. ನಗರಾಭಿವೃದ್ಧಿ ಇಲಾಖೆ 211 ಹುದ್ದೆಗಳ ನೇಮಕ ಪ್ರಕ್ರಿಯೆ ರದ್ದು ಮಾಡಿರುವುದಾಗಿ ತಿಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ತಮಗೆ ವರ್ಕ್ ಇನ್ಸ್‌ಪೆಕ್ಟರ್‌ ಹುದ್ದೆ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು.

- 2021ರಲ್ಲಿ ರದ್ದಾಗಿದ್ದ ವರ್ಕ್‌ ಇನ್ಸ್​ಪೆಕ್ಟರ್‌ ವೃಂದ

- ನಗರಾಭಿವೃದ್ಧಿ ಇಲಾಖೆ ಆದೇಶದ ಮೂಲಕ ರದ್ದು

- ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅಭ್ಯರ್ಥಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರದ ಪೆಟ್ರೋಲ್, ಡೀಸೆಲ್ ಸುಂಕ ಕಡಿತ ಚುನಾವಣಾ ಗಿಮಿಕ್, ಇದರಿಂದ ಜನರಿಗಲ್ಲ, ತೈಲ ಕಂಪನಿಗಳಿಗೆ ಲಾಭ: ಕಾಂಗ್ರೆಸ್
ರಾಜ್ಯ ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಹೊಸ ಬದಲಾವಣೆ: ಸರ್ಕಾರದಿಂದ ಹೊಸ ನಡೆ