
ಬೆಂಗಳೂರು (ಮಾ.28): ಕೇಂದ್ರ ಸರ್ಕಾರ ಈಗ ಡೀಸೆಲ್, ಪೆಟ್ರೋಲ್ ಮೇಲೆ ನೀಡಿರುವ ಸುಂಕ ವಿನಾಯ್ತಿಯಿಂದ ಖಾಸಗಿ ತೈಲ ಕಂಪೆನಿಗಳಿಗೆ ವಾರ್ಷಿಕ 3,60,000 ಕೋಟಿ ರು. ಲಾಭವಾಗಲಿದ್ದು, ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಇದೊಂದು ಚುನಾವಣಾ ಗಿಮಿಕ್ ಘೋಷಣೆ.
ಕೇಂದ್ರದ ಸುಂಕ ಕಡಿತ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಂಥದ್ದೊಂದು ಆರೋಪ ಮಾಡಿದ್ದಾರೆ.
ಅಲ್ಲದೆ, ಕೇಂದ್ರ ಸರ್ಕಾರ ಪ್ರತಿ ಚುನಾವಣೆ ಬಳಿಕವೂ ಬೆಲೆ ಹೆಚ್ಚಳ ಮಾಡುತ್ತದೆ. ಅದೇ ರೀತಿ ಏ.9 ಹಾಗೂ ಏ.23ರ ಬಳಿಕ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಲಿದೆ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಪರಿಣಾಮವಾಗಿ ನಯಾರ ತೈಲ ಕಂಪನಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹5.30 ಹಾಗೂ ಡೀಸೆಲ್ ಬೆಲೆ ₹3 ಏರಿಕೆ ಮಾಡಿದೆ. ಏ.9 ಹಾಗೂ 23ರಂದು ಪಂಚ ರಾಜ್ಯ ಚುನಾವಣೆ ನಡೆಯಲಿದ್ದು, ಇದಾದ ಬಳಿಕ ಕೇಂದ್ರ ಸರ್ಕಾರ ಇಂಧನ ಮತ್ತಷ್ಟು ಬೆಲೆ ಏರಿಕೆ ಮಾಡುವುದು ಬಹುತೇಕ ಖಚಿತ ಎಂದು ಹೇಳಿದರು.
ಪ್ರತಿ ಚುನಾವಣೆ ಮುಗಿದ ನಂತರ ಇಂಧನ ಬೆಲೆ ಏರಿಕೆ ಮಾಡುವುದು ಕೇಂದ್ರ ಬಿಜೆಪಿ ಸರ್ಕಾರದ ಕಾಯಕ. 2015ರ ದೆಹಲಿ ವಿಧಾನಸಭಾ ಚುನಾವಣೆ ಬಳಿಕ, 2019ರ ಲೋಕಸಭೆ ಚುನಾವಣೆ ಬಳಿಕ, 2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರ 16 ದಿನಗಳ ಅಂತರದಲ್ಲಿ 14 ಬಾರಿ ಏರಿಕೆ ಮಾಡಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಮತ್ತೆ ದರ ಹೆಚ್ಚಳ ಆಗಲಿದೆ ಎಂದರು.
ಸುಳ್ಳು ಹೇಳಿ ದಾರಿ ತಪ್ಪಿಸಿ ವಂಚಿಸುವುದು ಮೋದಿ ಸರ್ಕಾರಕ್ಕೆ ರೂಢಿ. ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಇದು ತೈಲ ಕಂಪನಿಗಳಿಗೆ ನೆರವಾಗಲಿದೆಯೇ ಹೊರತು ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ವಿಧಿಸಿ ₹43 ಲಕ್ಷ ಕೋಟಿ ಲೂಟಿ ಮಾಡಿದೆ. ಇದರೊಂದಿಗೆ ಮೋದಿ ಸರ್ಕಾರ 2014ರಿಂದ ಪ್ರತಿ ನಿತ್ಯ ₹1,000 ಕೋಟಿ ಪಡೆಯುತ್ತಿದೆ. 2014ರ ಮೇ 26ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹71.41 ಹಾಗೂ ಡೀಸೆಲ್ ₹56.71 ಇತ್ತು. ಇಂದು ಇವುಗಳ ಬೆಲೆ ಕ್ರಮವಾಗಿ ₹102.96 ಹಾಗೂ ₹90.99 ಆಗಿದೆ. 2014ರಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 108 ಅಮೆರಿಕನ್ ಡಾಲರ್ ಇತ್ತು. ಕೊಲ್ಲಿ ರಾಷ್ಟ್ರಗಳ ಬಿಕ್ಕಟ್ಟು ಉದ್ಭವಿಸುವ ಮುನ್ನ ಪ್ರತಿ ಬ್ಯಾರೆಲ್ ಬೆಲೆ 70 ಅಮೆರಿಕನ್ ಡಾಲರ್ ಮಾತ್ರ ಇತ್ತು. ಇಷ್ಟೆಲ್ಲಾ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಹೊರ್ಮುಜ್ ಜಲಸಂಧಿ ದಾಟಿ ಎರಡು ಇಂಧನ ಹಡಗುಗಳು ದೇಶಕ್ಕೆ ಬಂದಿವೆ. ಅದರಲ್ಲಿ ಒಂದನ್ನಾದರೂ ದಕ್ಷಿಣಕ್ಕೆ ಅಂದರೆ ಕರ್ನಾಟಕ, ತಮಿಳುನಾಡಿಗೆ ಕಳುಹಿಸಬಹುದಿತ್ತಲ್ಲವೇ? ಅವು ಗುಜರಾತಿಗೆ ಏಕೆ ಹೋದವು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಈಗ ಕೇರಳ, ತಮಿಳುನಾಡಿನಲ್ಲಿ ಚುನಾವಣೆಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಅವರ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಭಾರತವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಯಾಕೆ ಈ ಅನ್ಯಾಯ ಎಂದು ಪ್ರಶ್ನಿಸಿದರು.
2014ರಿಂದ 2025ರ ಅವಧಿಯಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ₹19.70 ಹಾಗೂ ಡೀಸೆಲ್ ಮೇಲೆ ₹15.50 ಸುಂಕ ವಿಧಿಸಿದೆ. ಇಂದು ಮೋದಿ ಸರ್ಕಾರ ಪೆಟ್ರೋಲ್ ಮೇಲೆ ₹13 ಹಾಗೂ ಡೀಸೆಲ್ ಮೇಲೆ ₹10 ಸುಂಕ ಇಳಿಸಿದ್ದು, ಇದರಿಂದ ತೈಲ ಕಂಪನಿಗಳಿಗೆ ನೆರವಾಗುತ್ತದೆ.
ಸುಳ್ಳು ಪ್ರಚಾರದ ಮೂಲಕ ಕೇಂದ್ರದ ಈ ತೀರ್ಮಾನದಿಂದ ತಿಂಗಳಿಗೆ ₹36,000 ಕೋಟಿ, ವರ್ಷಕ್ಕೆ 3,60,000 ಕೋಟಿ ಉಳಿತಾಯವಾಗಲಿದೆ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಜನರಿಗೆ ಒಂದು ರುಪಾಯಿ ಹೊರೆ ಕೂಡ ಕಡಿಮೆ ಆಗುವುದಿಲ್ಲ. ಅಡುಗೆ ಅನಿಲ ಬೆಲೆಗಳಲ್ಲೂ ಹೆಚ್ಚಳ ಮಾಡುವ ಮೂಲಕ ಕೇಂದ್ರ ಜನರ ಶೋಷಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ