ಸೌರ, ಪವನ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ‘ಹೈಬ್ರಿಡ್ ವಿದ್ಯುತ್’ ಆಗಿ ಪರಿವರ್ತನೆ, ಬ್ಯಾಟರಿಗಳಲ್ಲಿ ಸಂಗ್ರಹಿಸಿ ಪೂರೈಕೆ, ಕ್ರೆಡಲ್‌ನಿಂದ ಶೀಘ್ರ ಯೋಜನಾ ವರದಿ ಸಿದ್ಧ
ಗಿರೀಶ್ ಗರಗ
ಬೆಂಗಳೂರು(ಜೂ.08): ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸೌರ ಮತ್ತು ಪವನ ಶಕ್ತಿ ಮೂಲಕ ‘ಹೈಬ್ರಿಡ್ ವಿದ್ಯುತ್’ ಉತ್ಪಾದಿಸುವ ಯೋಜನೆ ರೂಪಿಸಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹೈಬ್ರಿಡ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ‘ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ’ (ಕ್ರೆಡಲ್) ಯೋಜನೆ ರೂಪಿಸಿದ್ದು, ಈ ಸಂಬಂಧ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ರಾಜ್ಯದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸೌರ ಮತ್ತು ಪವನ ವಿದ್ಯುತ್ ಪ್ರಮಾಣ ಹೆಚ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 15.7 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ವಿದ್ಯುತ್‌ನಲ್ಲಿ ಶೇ.50 ವಿದ್ಯುತ್ ರಾಜ್ಯಕ್ಕೆ ಪೂರೈಸಿ, ಉಳಿದ ವಿದ್ಯುತ್ತನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ಸೌರ ಮತ್ತು ಪವನ ಶಕ್ತಿ ಮೂಲಕ ಉತ್ಪಾದಿಸಲಾಗುವ ವಿದ್ಯುತ್ತನ್ನು ಸಮೀಕರಿಸಿ ‘ಹೈಬ್ರಿಡ್ ವಿದ್ಯುತ್’ ಆಗಿ ಪರಿವರ್ತಿಸಿ ಅದನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿ ಪೂರೈಸುವ ಯೋಜನೆ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಯೋಜನೆ ಜಾರಿಗೆ ಚಾಲನೆ ನೀಡಲಾಗುತ್ತದೆ.
ಬಾಡಿಗೆ ಮನೆಯಲ್ಲಿರೋರಿಗೆ ಸಿಗುತ್ತಾ 200 ಯುನಿಟ್ ಫ್ರೀ ವಿದ್ಯುತ್? ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ಹೀಗಿದೆ..
2022-27ನೇ ಸಾಲಿನ ನವೀಕರಿಸಬಹುದಾದ ಇಂಧನ ನೀತಿಯಲ್ಲಿ ನವೀಕರಿಸಬಹುದಾದ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಉತ್ಪಾದನೆಯಾಗುತ್ತಿರುವ 15.7 ಗಿಗಾ ವ್ಯಾಟ್ ವಿದ್ಯುತ್ ಪ್ರಮಾಣವನ್ನು ಶೇ.20 ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೀಗೆ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ನ್ನು ಬೇರೆಯವರಿಗೆ ಮಾರಾಟ ಮಾಡುವ ಬದಲು ಅದನ್ನು ಶೇಖರಿಸಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾದಾಗ ಬಳಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿಯೇ ಪವನ ಶಕ್ತಿ ಮತ್ತು ಸೌರಶಕ್ತಿ ಗ್ರಿಡ್‌ಗಳ ಮೂಲಕ ಉತ್ಪತ್ತಿಯಾಗುವ ವಿದ್ಯುತ್‌ನ್ನು ಒಂದು ಕಡೆ ಶೇಖರಿಸಿ ಹೈಬ್ರಿಡ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ.
ಬ್ಯಾಟರಿಗಳಲ್ಲಿ ಶೇಖರಣೆ:
ಈ ಯೋಜನೆಯಲ್ಲಿ ಪವನ ಶಕ್ತಿ, ಸೌರಶಕ್ತಿ ಗ್ರಿಡ್‌ಗಳ ಮೂಲಕ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್‌ನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದಾದ ನಂತರ ಎರಡೂ ವಿದ್ಯುತ್‌ನ್ನು ಒಟ್ಟಿಗೆ ಸೇರಿಸಿ ಹೈಬ್ರಿಡ್ ವಿದ್ಯುತ್ ಸಿದ್ಧಪಡಿಸಲಾಗುತ್ತದೆ. ಈ ಕ್ರಮದಿಂದ ಕನಿಷ್ಠ 5 ಗಿಗಾ ವ್ಯಾಟ್‌ನಷ್ಟುಹೈಬ್ರಿಡ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಸದ್ಯ ಪವನ ಶಕ್ತಿ ಹಾಗೂ ಸೋಲಾರ್ ಗ್ರಿಡ್‌ಗಳ ಮೂಲಕ ವಿದ್ಯುತ್ ಉತ್ಪಾದಿಸುವ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಚಿತ್ರದುರ್ಗ, ಕೊಪ್ಪಳ, ಧಾರವಾಡ, ರಾಯಚೂರು, ವಿಜಯನಗರ, ವಿಜಯಪುರ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಹೈಬ್ರಿಡ್ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ.
ಡಿಪಿಆರ್ ಪ್ರಮುಖ ಅಂಶಗಳು:
‘ಕ್ರೆಡಲ್‘ ಸಿದ್ಧಪಡಿಸುತ್ತಿರುವ ಡಿಪಿಆರ್‌ನಲ್ಲಿ ಹೈಬ್ರಿಡ್ ಪಾರ್ಕ್ ನಿರ್ಮಿಸುವ ವಿಧಾನ, ಸ್ಥಳಾವಕಾಶ ಎಷ್ಟಿರಬೇಕು, ಪವನ ಶಕ್ತಿ ಮತ್ತು ಸೌರಶಕ್ತಿ ಗ್ರಿಡ್‌ಗಳ ಮೂಲಕ ವಿದ್ಯುತ್‌ನ್ನು ಯಾವ ಮಾರ್ಗದಲ್ಲಿ ತರಬೇಕು, ಬ್ಯಾಟರಿಗಳ ಸಾಮರ್ಥ್ಯ ಎಷ್ಟಿರಬೇಕು ಎಂಬಂತಹ ಅಂಶಗಳು ಇರಲಿವೆ. ಸಾರ್ವನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸುವ ಬಗೆ ಹೇಗೆ ಎಂಬ ಬಗ್ಗೆಯೂ ವಿವರಗಳಿರಲಿವೆ.
200 ಯೂನಿಟ್ ವಿದ್ಯುತ್ ಫ್ರೀ: ಜು.1ರಿಂದ ಜಾರಿ
ರಾಜ್ಯದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ವಿವರ
ಸೌರವಿದ್ಯುತ್ :7.8 ಗಿಗಾ ವ್ಯಾಟ್
ಪವನ ಶಕ್ತಿ: 5.2 ಗಿಗಾ ವ್ಯಾಟ್
ಕೋ-ಜೆನ್: 1.73 ಗಿಗಾ ವ್ಯಾಟ್
ಬಯೋ ಮಾಸ್: 0.13 ಗಿಗಾ ವ್ಯಾಟ್
ಸಣ್ಣ ಹೈಡ್ರೋ: 0.9 ಗಿಗಾ ವ್ಯಾಟ್
ಸೋಲಾರ್ ಗ್ರಿಡ್ ಮತ್ತು ಪವನ ಶಕ್ತಿಯಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ತನ್ನು ಒಂದು ಕಡೆ ಶೇಖರಿಸಿ ಹೈಬ್ರಿಡ್ ವಿದ್ಯುತ್ ಉತ್ಪಾದಿಸುವ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಯೋಜನೆ ಅನುಷ್ಠಾನ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಒಟ್ಟು 5 ಗಿಗಾ ವ್ಯಾಟ್ ಹೈಬ್ರಿಡ್ ವಿದ್ಯುತ್ ಬಳಕೆಗೆ ಸಿಗುವಂತೆ ಮಾಡಲು ಹೈಬ್ರಿಡ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಅಂತ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ತಿಳಿಸಿದ್ದಾರೆ.