ಬೆಂಗಳೂರು ಸಂಚಾರ ಹಾಗೂ ರಸ್ತೆ ಸುರಕ್ಷಾ ವಿಭಾಗದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು (ಜೂ.07): ಬೆಂಗಳೂರು ಸಂಚಾರ ಹಾಗೂ ರಸ್ತೆ ಸುರಕ್ಷಾ ವಿಭಾಗದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಗಿದ್ದ ಅಲೋಕ್ ಕುಮಾರ್ ಅವರನ್ನು ಈಗ ಬೆಂಗಳೂರು ಸಂಚಾರ ಹಾಗೂ ರಸ್ತೆ ಸುರಕ್ಷಾ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಇತರೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಆರ್. ಹಿತೇಂದ್ರ, ಉಮೇಶ್ ಕುಮಾರ್ ಹಾಗೂ ಸೌಮೆಂದು ಮುಖರ್ಜಿ ಸಹ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅಲೋಕ್ ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ (ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್: ಡಿನೋಟಿಫಿಕೇಶನ್ ಪ್ರಕರಣ ರದ್ದು
ಸೌಮೇಂದು ಮುಖರ್ಜಿ ಆಡಳಿತ ವಿಭಾಗದ ಎಡಿಜಿಪಿ: ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೌಮೇಂದು ಮುಖರ್ಜಿ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಆಡಳಿತ ವ್ಯವಸ್ಥೆ ಪುನಾರಚನೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಇಡೀ ರಾಜ್ಯದ ಅಧಿಕಾರವನ್ನು ಪುನರಚನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 20ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ಹಾಗೂ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರೂ, ಈಗ ಮತ್ತೊಮ್ಮೆ ನಾಲ್ವರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಆಡಳಿತ ವ್ಯವಸ್ಥೆಯನ್ನು ಪುನಾರಚನೆ ಮಾಡಿಕೊಳ್ಳುತ್ತಿದೆ.
ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅಧಿಕಾರ ಸ್ವೀಕಾರ: ಕೇಂದ್ರ ಸರ್ಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿರುವುದರಿಂದ ರಾಜ್ಯ ಸರ್ಕಾರ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಸೇವೆಯಿಂದ ಬಿಡುಗಡೆಗೊಳಿಸಿತು. ಇವರಿಂದ ತೆರವಾಗುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಯನ್ನು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (DGP alok mohan) ಅವರಿಗೆ ಹೆಚ್ಚುವರಿಯಾಗಿ ನೀಡಿ ಆದೇಶಿಸಿತ್ತು. ಅದರಂತೆ ಅಧಿಕಾರ ಹಸ್ತಾಂತರ ನಡೆಯಿತು.
ಅಲೋಕ್ ಮೋಹನ್ 2025ಕ್ಕೆ ನಿವೃತ್ತಿ: ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಅಲೋಕ್ ಮೋಹನ್ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ. ಬಿಹಾರ ಮೂಲದ ಅಲೋಕ್ ಮೋಹನ್ 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ. ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ 36 ವರ್ಷಗಳ ಸೇವಾ ಅನುಭ ಹೊಂದಿದ್ದಾರೆ. ರಾಜ್ಯ ಐಪಿಎಸ್ ಅಧಿಕಾರಿಗಳ ಸೇವಾ ಜೇಷ್ಠತೆ ಆಧಾರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ರೇಸ್‌ನಲ್ಲಿದ್ದರು. ಅಲೋಕ್ ಮೋಹನ್ ಅವರು 2025ರ ಏಪ್ರಿಲ್‌ಗೆ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕ ಹಿನ್ನೆಲೆ; ಡಿಜಿಪಿಯಾಗಿ ಅಲೋಕ್ ಪದಗ್ರಹಣ
ನೂತನ ಅಡ್ವೊಕೇಟ್ ಜನರಲ್ ಆಗಿ ಶಶಿಕಿರಣ್ ಶೆಟ್ಟಿ ನೇಮಕ: ಬೆಂಗಳೂರು ರಾಜ್ಯದ ನೂತನ ಅಡ್ವೊಕೇಟ್ ಜನರಲ್ (ಎಜಿ) ಹುದ್ದೆಗೆ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿಅವರನ್ನು ನೇಮಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಲಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿಅವರನ್ನು ಎಜಿ ಆಗಿ ನೇಮಕ ಮಾಡಿದ್ದಾರೆ. ಈ ನೇಮಕಾತಿ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಎಂ. ಹಿರೇಮಠ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.