Mysuru: ಒಣಗಿದ ದಾಸವಾಳದ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ

Published : Mar 30, 2026, 12:42 PM IST
Mysuru Child Death

ಸಾರಾಂಶ

ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು, ಒಣಗಿದ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಹೂವು ಗಂಟಲಲ್ಲಿ ಸಿಲುಕಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಸೂರು (ಮಾ.30): ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅತ್ಯಂತ ದುರದೃಷ್ಟಕರ ಹಾಗೂ ಮನಕಲಕುವ ಘಟನೆಯೊಂದು ನಡೆದಿದ್ದು, ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು ಒಣಗಿದ ದಾಸವಾಳದ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.

ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿಗೌಡ ಮೃತಪಟ್ಟ ಕರುಳ ಕುಡಿ. ಶನಿವಾರ ಈ ಪುಟ್ಟ ಕಂದಮ್ಮ ತನ್ನ ಅಣ್ಣನೊಂದಿಗೆ ಮನೆಯಲ್ಲಿ ಆಟವಾಡುತ್ತಿತ್ತು. ಈ ವೇಳೆ ಮನೆಯ ಹೊಸಲಿನಲ್ಲಿ ಪೂಜೆ ಮಾಡಿ ಇಟ್ಟಿದ್ದ ದಾಸವಾಳದ ಹೂವು ಒಣಗಿ ಬಿದ್ದಿತ್ತು. ಆಟವಾಡುವ ವೇಳೆ ಮಗು ಆ ಒಣಗಿದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ.

ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದ ಕುಟುಂಬ

ತನ್ನ ಕೈಯಲ್ಲಿದ್ದ ಹೂವಿನ ತುಂಡನ್ನು ಅಣ್ಣ ಕಿತ್ತುಕೊಳ್ಳಬಹುದೆಂಬ ಭಯದಲ್ಲಿ ಮಗು ಅದನ್ನು ನುಂಗಲು ಯತ್ನಿಸಿದೆ. ಈ ಸಂದರ್ಭದಲ್ಲಿ ಹೂವಿನ ತುಂಡು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡಿದೆ. ಆರಂಭದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆಗೆ ಕಾರಣವೇನು ಅನ್ನೋದು ಗೊತ್ತಾಗಿರಲಿಲ್ಲ. ಆಸ್ಪತ್ರೆಗೆ ತೆಗೆದುಕೊಂಡು ಹೋದ ಬಳಿಕವೇ ಮಗು ಹೂವು ನುಂಗಿದ್ದು ಗೊತ್ತಾಗಿದೆ. ಉಸಿರನ್ನು ಎಳೆದುಕೊಳ್ಳುತ್ತಲೇ, ಆಸ್ಪತ್ರೆಯ ಬೆಡ್‌ ಮೇಲೆ ಮಗು ಪ್ರಾಣ ಬಿಟ್ಟಿದ್ದು ಕರುಳು ಹಿಂಡುವಂತಿದೆ.

ತಕ್ಷಣವೇ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ತಾಯಿಯೊಂದಿಗೆ ಮಗು ಚಿನ್ಮಯಿ ಗೌಡ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೋನಿಗೆ ಬಿದ್ದ ಹೆಣ್ಣು ಹುಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಗಂಡುಗಲಿಗಳು
ವಯೋಮಿತಿ ಸಮರ: 60 ದಿನ ಸಡಿಲಿಕೆ ನಂತರ ಸರ್ಕಾರದ ವಿರುದ್ಧ ಬೃಹತ್ ಆಂದೋಲನಕ್ಕೆ ಸಜ್ಜಾದ ಪೋಷಕರು