ಕೋವಿಡ್‌ ಲಸಿಕೆ: ಫ್ರೀ 3ನೇ ಡೋಸ್‌ಗೆ ಭಾರೀ ಬೇಡಿಕೆ

By Kannadaprabha News  |  First Published Jul 30, 2022, 7:03 AM IST

ಲಸಿಕೆಗೆ ಶುಲ್ಕ ಇದ್ದಾಗ ನಿತ್ಯ 4000, ಈಗ ಪ್ರತಿನಿತ್ಯ ಲಕ್ಷ ಜನರಿಗೆ ನೀಡಿಕೆ


ಬೆಂಗಳೂರು(ಜು.30):  ಕೇಂದ್ರ ಸರ್ಕಾರವು 18-59 ವರ್ಷದವರಿಗೂ ಕೊರೋನಾ ಲಸಿಕೆ 3ನೇ ಡೋಸ್‌ (ಮುಂಜಾಗ್ರತಾ ಡೋಸ್‌ ಅಥವಾ ಬೂಸ್ಟರ್‌ ಡೋಸ್‌) ಉಚಿತ ನೀಡಲಾರಂಭಿಸಿದ ನಂತರ ರಾಜ್ಯದಲ್ಲಿ ಮೂರನೇ ಡೋಸ್‌ ಪಡೆಯುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 15 ದಿನಗಳಲ್ಲಿ ನಿತ್ಯ ಸರಾಸರಿ 1 ಲಕ್ಷ ಮಂದಿಯಂತೆ 15.8 ಲಕ್ಷ ಮಂದಿ 3ನೇ ಡೋಸ್‌ ಪಡೆದಿದ್ದಾರೆ. ಏ.10ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್‌ ಆರಂಭಿಸಲಾಯಿತು. ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಎಂದು ಘೋಷಿಸಲಾಗಿತ್ತು. ಆದರೆ, 18-59 ವರ್ಷದವರಿಗೆ ಮಾತ್ರ 225 ರು. ಶುಲ್ಕ ನಿಗದಿ ಪಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಲಾಗಿತ್ತು.

ಲಸಿಕೆ ಉಚಿತವಾಗಿ ಲಭಿಸದಿದ್ದ ಕಾರಣ ಹಾಗೂ ಸರ್ಕಾರಿ ಆಸ್ಪತ್ರೆ ಬದಲು ಆಯ್ದ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಲಭಿಸುತ್ತಿದ್ದ ಕಾರಣ 18- 59 ವಯೋಮಾನದ ಬಹುತೇಕ ಜನರು ಲಸಿಕೆಯಿಂದ ದೂರು ಉಳಿದಿದ್ದರು. ಅದರಲ್ಲೂ ರಾಜ್ಯದಲ್ಲಿ ಏಪ್ರಿಲ್‌ 10ರಿಂದ ಜುಲೈ 15ವರೆಗೂ (96 ದಿನಗಳಲ್ಲಿ) ನಿತ್ಯ ಸರಾಸರಿ ನಾಲ್ಕು ಸಾವಿರದಂತೆ 3.9 ಲಕ್ಷ ಮಂದಿ (18-59 ವರ್ಷದವರು) ಮಾತ್ರ ಮೂರನೇ ಡೋಸ್‌ ಪಡೆದಿದ್ದರು.
ಆದರೆ, ಜುಲೈ 15ರಿಂದ ಕೇಂದ್ರ ಸರ್ಕಾರವು ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ ಆರಂಭಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾರಂಭಿಸಿದ ನಂತರ ಮೂರನೇ ಡೋಸ್‌ ಪಡೆಯುವವರ ಸಂಖ್ಯೆ ನಿತ್ಯ 1 ಲಕ್ಷಕ್ಕೆ ಹೆಚ್ಚಳವಾಗಿದೆ.

Tap to resize

Latest Videos

undefined

ಐದೂವರೆ ತಿಂಗಳ ಬಳಿಕ ಕರ್ನಾಟಕದಲ್ಲಿ 2000ಕ್ಕೂ ಅಧಿಕ ಕೋವಿಡ್‌ ಪ್ರಕರಣ: 4 ಸಾವು

ಸೆಪ್ಟೆಂಬರ್‌ 30ವರೆಗೂ ಉಚಿತ:

ಕೊರೋನಾ ಲಸಿಕೆಯ 3ನೇ ಡೋಸ್‌ ಅನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನದಡಿ ಸದ್ಯ ರಾಜ್ಯದ ಪ್ರಾಥಮಿಕ, ತಾಲೂಕು, ಜಿಲ್ಲಾ ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಸೂಕ್ತ ದಿನ ನಿಗದಿಪಡಿಸಿ ನೀಡುತ್ತಿದ್ದಾರೆ. 2ನೇ ಡೋಸ್‌ ಪಡೆದು 2 ತಿಂಗಳು ಪೂರ್ಣಗೊಂಡವರು ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು. ಸೆಪ್ಟೆಂಬರ್‌ 30ವರೆಗೂ ಉಚಿತವಾಗಿ ಮೂರನೇ ಡೋಸ್‌ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

3.6 ಕೋಟಿ ಬಾಕಿ:

ಕೇಂದ್ರ ಸರ್ಕಾರ ಕಳೆದ ವಾರದ ಮೂರನೇ ಡೋಸ್‌ ಅಂತರವನ್ನು 9ರಿಂದ 6 ತಿಂಗಳಿಗೆ ಇಳಿಕೆ ಮಾಡಿದೆ. ಅದರಂತೆ ರಾಜ್ಯದಲ್ಲಿ ಎರಡನೇ ಡೋಸ್‌ ಪಡೆದು ಆರು ತಿಂಗಳು ಪೂರ್ಣಗೊಂಡು ಮೂರನೇ ಡೋಸ್‌ ಪಡೆಯಬೇಕಿರುವವರ 18-59 ವರ್ಷದವರ ಸಂಖ್ಯೆ 3.8 ಕೋಟಿಯಾಗಿದೆ. ಈವರೆಗೂ 19.7 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌ ಪಡೆದಿದ್ದು, 3.6 ಕೋಟಿಗೂ ಅಧಿಕ ಮಂದಿ ಬಾಕಿ ಇದ್ದಾರೆ.
 

click me!