
ಹುಬ್ಬಳ್ಳಿ/ಧಾರವಾಡ (ಸೆ.03): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ಯುವತಿ ನೇಹಾ ಹಿರೇಮಠ ಕೊಲೆ ಪ್ರಕರಣದ ಪ್ರಮುಖ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡದ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜಾಮೀನಿನ ಮೇಲೆ ಹೊರಬರಲು ಫಯಾಜ್ ಮಾಡಿದ್ದ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್, ಜಾಮೀನು ಪಡೆಯಲು ನಡೆಸಿದ್ದ ಕಾನೂನು ಹೋರಾಟಕ್ಕೆ ಮತ್ತೊಮ್ಮೆ ತೀವ್ರ ಹಿನ್ನಡೆ ಉಂಟಾಗಿದೆ.
ಫಯಾಜ್ ವಕೀಲರ ವಾದವೇನು?
ಆರೋಪಿ ಫಯಾಜ್ ಪರ ವಕೀಲರು ನ್ಯಾಯಾಲಯದಲ್ಲಿ ಹಲವು ಪ್ರಮುಖ ಅಂಶಗಳನ್ನು ಮುಂದಿಟ್ಟು ವಾದ ಮಂಡಿಸಿದ್ದರು. ಮೊದಲನೆಯದಾಗಿ, ಪೊಲೀಸರು ಫಯಾಜ್‌ನ ಬಂಧನ ಪ್ರಕ್ರಿಯೆಯನ್ನು ಸರಿಯಾಗಿ ನಡೆಸಿಲ್ಲ ಎಂದು ವಾದಿಸಿದ್ದರು. ಬಂಧನಕ್ಕೆ ಸಂಬಂಧಿಸಿದಂತೆ ಆತನ ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಪೊಲೀಸರು ಈ ಪ್ರಕರಣದಲ್ಲಿ ಸರಿಯಾದ ಸಾಕ್ಷಿ ಮತ್ತು ಆಧಾರಗಳನ್ನು ಸಂಗ್ರಹಿಸಿಲ್ಲ, ಹೀಗಾಗಿ ಫಯಾಜ್‌ಗೆ ಜಾಮೀನು ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದರು.
ಇದೇ ವೇಳೆ, ಇತ್ತೀಚೆಗೆ ಜಾಮೀನು ಪಡೆದಿದ್ದ ನಟ ದರ್ಶನ್ ಅವರ ಪ್ರಕರಣವನ್ನು ಉಲ್ಲೇಖಿಸಿ, 'ದರ್ಶನ್ ಮಾದರಿಯಲ್ಲಿ ನಮಗೂ ಜಾಮೀನು ನೀಡಿ' ಎಂದು ವಾದ ಮಂಡಿಸಿದ್ದರು. ಆದರೆ, ನ್ಯಾಯಾಧೀಶರು ಸುದೀರ್ಘ ವಾದ-ಪ್ರತಿವಾದವನ್ನು ಆಲಿಸಿದ ನಂತರ ಫಯಾಜ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ (23) ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ (MCA) ವಿದ್ಯಾರ್ಥಿನಿಯಾಗಿದ್ದರು. 2024ರ ಏಪ್ರಿಲ್ 18ರಂದು ಕಾಲೇಜು ಆವರಣದಲ್ಲೇ ನೇಹಾ ಅವರನ್ನು ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆರೋಪಿ ಫಯಾಜ್‌ನನ್ನು ಅಂದೇ ಬಂಧಿಸಲಾಗಿತ್ತು. ಈ ಕೃತ್ಯದ ಹಿಂದಿನ ಉದ್ದೇಶ ಪ್ರೇಮ ನಿರಾಕರಣೆ ಎಂದು ಹೇಳಲಾಗಿತ್ತು.
ಫಯಾಜ್ ಹಲವು ದಿನಗಳಿಂದ ನೇಹಾ ಅವರನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಮತ್ತು ಇದಕ್ಕೆ ನೇಹಾ ನಿರಾಕರಿಸಿದ್ದರು. ಆಕೆ ತನ್ನ ದಾರಿಗೆ ಅಡ್ಡ ಬರಬಾರದೆಂದು ಫಯಾಜ್ ಅನ್ನು ದೂರ ತಳ್ಳಿದಾಗ, ಕೋಪಗೊಂಡ ಆತ ಆಕೆಯನ್ನು ಕೊಲೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಈ ಘಟನೆ ಕಾಲೇಜು ಕ್ಯಾಂಪಸ್‌ನಲ್ಲೇ ನಡೆದಿರುವುದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿತ್ತು. ಈ ಘಟನೆ ನಂತರ, ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ನೇಹಾ ಹಿರೇಮಠ ಅವರಿಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದವು.
ಸರ್ಕಾರ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವ ಭರವಸೆ ನೀಡಿತ್ತು. ಇದೀಗ ನ್ಯಾಯಾಲಯ ಫಯಾಜ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಮೂಲಕ, ಪ್ರಕರಣದಲ್ಲಿ ಮತ್ತೊಮ್ಮೆ ಸತ್ಯದ ಪರ ನಿಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದ ಈ ಆದೇಶವು ನೇಹಾ ಕುಟುಂಬದವರಿಗೆ ಒಂದಿಷ್ಟು ಸಮಾಧಾನ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ