
ಬೆಂಗಳೂರು (ಏ.26): ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಲಾಗಿದೆಯೇ ಅಥವಾ ಇಲ್ಲವೇ? ಯಾವ ತರಕಾರಿಯನ್ನು ಯಾರಿಗೆ ಮಾರಾಟ ಮಾಡಲಾಗಿದೆ ಎಂಬ ವಿಚಾರವನ್ನು ಹೈಕೋರ್ಟ್ ಹೇಗೆ ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ. ಇಂತಹದೊಂದು ಪ್ರಶ್ನೆಯನ್ನು ರಾಜ್ಯ ಹೈಕೋರ್ಟ್ ವಕೀಲರೊಬ್ಬರ ಮುಂದೆ ಇರಿಸಿದ ಘಟನೆ ನಡೆಯಿತು. ನಗರದ ಕೆ.ಆರ್.ಮಾರುಕಟ್ಟೆ, ಅವೆನ್ಯೂ ಮತ್ತು ಎಸ್‌ಜೆಪಿ ರಸ್ತೆಗಳ ಪಾದಚಾರಿ ಮಾರ್ಗ, ರಸ್ತೆಯ ಎರಡೂ ಬದಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಹಣ್ಣು ಮತ್ತು ಹೂ ಮಾರಾಟ ಮಾಡುವುದನ್ನು ಶಾಶ್ವತವಾಗಿ ನಿರ್ಬಂಧಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಗರದ ಎನ್.ಎಸ್.ಪಾಳ್ಯ ನಿವಾಸಿ ಬಿ.ಸುನೀಲ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಬೀದಿ ಬದಿ ವ್ಯಾಪಾರಿಗಳು ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ ಮತ್ತು ಎಸ್‌ಜೆಪಿ ರಸ್ತೆಯಲ್ಲಿ ಪಾದಚಾರಿ ಮಾರ್ಗ, ರಸ್ತೆಯ ಎರಡೂ ಬದಿಯಲ್ಲಿ ಹಣ್ಣು ಮತ್ತು ಹೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹಚ್ಚಾಗಿದೆ. ಜನ ಹಾಗೂ ವಾಹನಗಳ ಸುಗಮ ಸಂಚಾರವೇ ಕಷ್ಟವಾಗಿದೆ. ಈ ರಸ್ತೆಗಳ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಹೂ ಮಾರಾಟವನ್ನು ಶಾಶ್ವತವಾಗಿ ನಿರ್ಬಂಧಿಸಲು ಕೋರಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2023ರ ಸೆ.22ರಂದು ಮನವಿ ಪತ್ರ ಸಲ್ಲಿಸಲಾಗಿದೆ.
ಅದನ್ನು ಈವರೆಗೆ ಪರಿಗಣಿಸಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಪತ್ರ ಪರಿಗಣಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿದರು. ಈ ಮನವಿಗೆ ತೀವ್ರವಾಗಿ ಆಕ್ಷೇಪಿಸಿದ ನ್ಯಾಯಪೀಠ, ತರಕಾರಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆಯೇ? ಅಥವಾ ನಡೆಸಲಾಗುತ್ತಿದೆಯೇ? ಯಾರಿಗೆ ಯಾವ ತರಕಾರಿ ಮಾರಾಟ ಮಾಡಲಾಗಿದೆ ಎಂಬ ವಿಚಾರಗಳನ್ನು ಹೈಕೋರ್ಟ್ ಹೇಗೆ ಪರಿಶೀಲನೆ ಅಥವಾ ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ ಎಂದು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ನೀವು ಬೇಕಾದರೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರಿಗೆ ಮನವಿ ಮಾಡಬಹುದು.
ಇಂದಿರಾ ಆಸ್ತಿ ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ರದ್ದುಪಡಿಸಿದ್ದ ರಾಜೀವ್: ಪ್ರಧಾನಿ ಮೋದಿ ಕಿಡಿ
ಒಮ್ಮೆ ಲೋಕಾಯುಕ್ತ ಕಾಯ್ದೆಯನ್ನು ಓದಿ. ಲೋಕಾಯುಕ ಸಂಸ್ಥೆಯಲ್ಲಿ ಜನರ ಕುಂದುಕೊರತೆಗಳಿಗೆ ಪರಿಹಾರ ಘಟಕವಿದೆ. ಅದಕ್ಕೆ ನೀವು ಮನವಿ ಸಲ್ಲಿಸಿ. ಆದರೆ, ನೀವು ಆಕ್ಷೇಪ ಎತ್ತಿರುವ ವಿಚಾರಗಳನ್ನು ಹೈಕೋರ್ಟ್ ಮೇಲ್ವಿಚಾರಣೆ ನಡೆಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ನುಡಿಯಿತು. ಇದರಿಂದ ಲೋಕಾಯುಕ್ತ ಮೊರೆ ಹೋಗಲು ಅವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಕುಂದುಕೊರತೆ ಪರಿಹಾರಕ್ಕಾಗಿ ಲೋಕಾಯುಕ್ತ ಮೊರೆ ಹೋಗಲು ಸ್ವತಂತ್ರವಾಗಿದ್ದಾರೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ