ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಬಡ ಕುಟುಂಬಗಳು ಸೂರು ಕಳೆದುಕೊಂಡು ಅವರ ಬದುಕು ಅತಂತ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಕುಟುಂಬದ ಸ್ಥಿತಿ ಹೇಳತೀರದು.
ಧಾರವಾಡ (ಜು.29) : ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಬಡ ಕುಟುಂಬಗಳು ಸೂರು ಕಳೆದುಕೊಂಡು ಅವರ ಬದುಕು ಅತಂತ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಕುಟುಂಬದ ಸ್ಥಿತಿ ಹೇಳತೀರದು.
ಜಿಲ್ಲೆಯ ಎಲ್ಲೆಡೆ ಒಂದೊಂದು ರೀತಿಯ ಪ್ರಕರಣಗಳಿದ್ದರೆ, ತಾಲೂಕಿನ ಲಕಮಾಪುರ ಗ್ರಾಮದೊಳಗೆ ಹೋಗುತ್ತಿದ್ದಂತೆಯೇ ಬಹುತೇಕ ಕಡೆಗಳಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗಳ ದೃಶ್ಯಗಳೇ ಕಣ್ಣಿಗೆ ಬೀಳುತ್ತವೆ. ಈ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೂರಾರು ಮನೆಗಳು ಮಳೆಯಿಂದಾಗಿ ಕುಸಿದು ಬಿದ್ದಿವೆ. ಈ ಬಾರಿ ವಾರವಿಡೀ ಸುರಿದ ಮಳೆಗೆ ಲಕಮಾಪೂರ ಗ್ರಾಮದ ಇಮಾಂಬಿ ಅವರ ಮನೆಯೂ ಬಿದ್ದಿದೆ. ಮನೆಯ ಚಾವಣಿ ಕುಸಿದು ಬಿದಿದ್ದು, ಮನೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರ್ಯಾಸವೆಂದರೆ ಬೇರೆ ಕಡೆ ವಾಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೇ ಮನೆಯಲ್ಲಿ ವಾಸ್ತವ್ಯ ಮುಂದುವರೆಸಿದ್ದಾರೆ.
undefined
ನಿರಂತರ ಮಳೆಗೆ ಕುಸಿದು ಬಿದ್ದ ಮನೆ; ಸುರಿವ ಮಳೆಯಲ್ಲೇ ಹೊರಗೆ ನಿಂತ ಕುಟುಂಬ!
ಇದೇ ಗ್ರಾಮದ ಖಾದರ್ ಸಾಬ್ ನದಾಫ್ ಎಂಬುವರು ಪಾಶ್ರ್ವವಾಯು ಪೀಡಿತರು. ಕಳೆದ ವರ್ಷ ಸುರಿದಿದ್ದ ಮಳೆಗೆ ಅವರ ಈ ಮನೆ ಬಿದ್ದಿತ್ತು. ಅದಾಗಿ ವರ್ಷವೇ ಉರುಳಿದರೂ ಇವರಿಗೆ ಪರಿಹಾರ ಬಂದಿಲ್ಲ. ಶ್ರೀಮಂತರ ಮನೆ ಕೊಂಚ ಬಿದ್ದಿದ್ದರೂ ಅವರಿಗೆ .5 ಲಕ್ಷ ಪರಿಹಾರ ಸಿಕ್ಕಿದೆ. ಆದರೆ ಬಡವರ ಮನೆ ಸಂಪೂರ್ಣ ಬಿದ್ದರೂ ಅವರಿಗೆ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಕಳೆದ ವರ್ಷವೇ ಬಿದ್ದ ಮನೆಗೆ ಪರಿಹಾರ ಸಿಕ್ಕಿಲ್ಲ. ಅಂದರೆ ಈ ಬಾರಿ ಬಿದ್ದ ಮನೆಗಳಿಗೆ ಅದೆಲ್ಲಿಯ ಪರಿಹಾರ ಸಿಗುತ್ತೆ ಎಂಬುದು ಅವರ ಪ್ರಶ್ನೆಯಾಗಿದೆ.
ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ, ಜುಲೈ 26ರ ಬೆಳಗ್ಗೆ 8ರಿಂದ 27ರ ಬೆಳಗ್ಗೆ 8ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 87, ಅಳ್ನಾವರದಲ್ಲಿ ನಾಲ್ಕು, ಹುಬ್ಬಳ್ಳಿ ಗ್ರಾಮೀಣದಲ್ಲಿ 11, ಹುಬ್ಬಳ್ಳಿ ಶಹರದಲ್ಲಿ ಐದು ಮತ್ತು 2 ತೀವ್ರ, ಕಲಘಟಗಿ ತಾಲೂಕಿನಲ್ಲಿ 45, ಕುಂದಗೋಳ ತಾಲೂಕಿನಲ್ಲಿ 26, ನವಲಗುಂದ ತಾಲೂಕಿನಲ್ಲಿ 10 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 8 ಸೇರಿದಂತೆ ಜಿಲ್ಲೆಯ 8 ತಾಲೂಕಗಳಲ್ಲಿನ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಹಾಗೆಯೇ, ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್ 1ರಿಂದ ಜುಲೈ 27ರ ವರೆಗೆ 677 ಮನೆಗಳಿಗೆ ಭಾಗಶಃ ಹಾಗೂ 15 ಮನೆಗಳಿಗೆ ತೀವ್ರತರವಾಗಿ ಹಾನಿಯಾಗಿದೆ. ಒಟ್ಟಾರೆ ಇಲ್ಲಿ ವರೆಗೆ ಸುಮಾರು 692 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದ ಬಂದಿದೆ.
ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ
ಮನೆ ಬಿದ್ದ ಪ್ರಕರಣ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಹಸೀಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ಅಗತ್ಯ ಕ್ರಮ ಜರುಗಿಸಲಾಗುವುದು.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು