
ವಿಧಾನಪರಿಷತ್ತು (ಮಾ.14): ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉಂಟಾಗಿರುವ ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹೋಟೆಲ್‌ಗಳಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅನ್ನು ಬೇಡಿಕೆಗೆ ಅನುಗುಣವಾಗಿ ಒದಗಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಆಸ್ಪತ್ರೆ, ವಸತಿ ನಿಲಯ, ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಅಡುಗೆ ಅನಿಲ ಪೂರೈಸಲಾಗುವುದು. ಸಿಲಿಂಡರ್ ಸಮಸ್ಯೆ ಇನ್ನು 10 ದಿನದೊಳಗೆ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಐವಾನ್ ಡಿಸೋಜಾ, ನಾಗರಾಜ್ ಯಾದವ್ ಅವರು ಅಡುಗೆ ಅನಿಲ ಪೂರೈಕೆಯಲ್ಲಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಕೆ.ಎಚ್.ಮುನಿಯಪ್ಪ, ತೈಲ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಬೆಳಗ್ಗೆ ಸಭೆ ನಡೆಸಿದ್ದೇನೆ. ಆಸ್ಪತ್ರೆ, ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಗ್ಯಾಸ್ ಪೂರೈಸಲು ಸೂಚಿಸಲಾಗಿದೆ. ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಸಲು ಸದ್ಯದ ಮಟ್ಟಿಗೆ ಸಾಕಷ್ಟು ದಾಸ್ತಾನಿಲ್ಲ. ಇನ್ನು 10 ದಿನಗಳೊಳಗೆ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ಅಲ್ಲಿಯವರೆಗೆ ಹೋಟೆಲ್ ಮಾಲೀಕರು ತಾಳ್ಮೆಯಿಂದ ಇರಬೇಕು. ಅಡುಗೆ ಅನಿಲದ ಬದಲು ಎಲೆಕ್ಟ್ರಿಕ್ ಸ್ಟೌವ್‌ಗಳನ್ನು ಬಳಸಬಹುದು ಎಂದರು.
ಈಗಾಗಲೇ ಮಧ್ಯಪ್ರಾಚ್ಯದಿಂದ 2 ಹಡಗುಗಳಲ್ಲಿ ತೈಲ ಬಂದಿದ್ದು, ಇನ್ನೂ 10 ರಿಂದ 12 ಹಡಗುಗಳು ಬರಬೇಕಿದೆ. ಸದ್ಯಕ್ಕೆ ಸಮಸ್ಯೆ ಉಲ್ಬಣಿಸಿಲ್ಲ. ಉಳಿದ 10ರಿಂದ 12 ಹಡಗುಗಳು ಬಂದರೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ. ಇನ್ನು, ಕಾಳಸಂತೆಯಲ್ಲಿ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ನಿಗಾವಹಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆಟೋ ರಿಕ್ಷಾಗಳಿಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಸೂಚಿಸಲಾಗಿದೆ. ಮಂಗಳೂರಿನಲ್ಲೂ ಆಟೋ ಚಾಲಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಯೂ ಆಟೋಗಳಿಗೆ ಗ್ಯಾಸ್ ನೀಡುವಂತೆ ಸೂಚಿಸಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ