ನಿಯಮ ಉಲ್ಲಂಘಿಸಿ ಸರ್ಕಾರಿ ಬಸ್ ಓಡ್ಸಿದ ಹೊನ್ನಾಳಿ ಶಾಸಕ| ಲೈಸನ್ಸ್ ಇಲ್ಲ, ಆತ್ಮ ವಿಶ್ವಾಸವಿದೆ ಹೀಗಾಗಿ ಬಸ್ ಚಲಾಯಿಸಿದೆ ಎಂದ ರೇಣುಕಾಚಾರ್ಯ| ನಿಯಮ ಉಲ್ಲಂಘನೆ ಕೇಸ್ ದಾಖಲಾದ್ರೂ ಶಾಸಕರ ಹಾರಿಕೆಯ ಉತ್ತರ
ದಾವಣಗೆರೆ[ಜ.06]: ಲೈಸನ್ಸ್ ಇಲ್ಲದೇ, ಖಾಕಿ ಶರ್ಟ್ ಧರಿಸಿ 58 ಕಿ. ಮೀಟರ್ ಸರ್ಕಾರಿ ಬಸ್ ಓಡಿಸಿ ಸೌಂಡ್ ಮಾಡಿದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ಈಗ ಸಂಕಷ್ಟ ಒಂದು ಎದುರಾಗಿದೆ. ನಿಯಮ ಉಲ್ಲಂಘಿಸಿ ಬಸ್ ಚಲಾಯಿಸಿದ ಶಾಸಕನ ವಿರುದ್ಧ ಹೈಕೋರ್ಟನಲ್ಲಿ ಕೇಸ್ ದಾಖಲಾಗಿದೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವರ ಜೀವದೊಂದಿಗೆ ಚೆಲ್ಲಾಟವಾಡಿದ ರೇಣುಕಾಚಾರ್ಯ ಮಾತ್ರ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಹೌದು ಹೊನ್ನಾಳಿ ಪಟ್ಟಣದಿಂದ ಬೆನಕನಹಳ್ಳಿಗೆ ಈವರೆಗೂ ಬಸ್ ಸೌಕರ್ಯ ಇರಲಿಲ್ಲ. ತಮ್ಮ ಊರಿಗೆ ಬಸ್ ಸೌಕರ್ಯ ಕಲ್ಪಿಸಬೇಕೆಂಬ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದ ಶಾಸಕ ರೇಣುಕಾಚಾರ್ಯ ಅಲ್ಲಿಗೆ ಬಸ್ ವ್ಯವಸ್ಥೆ ಮಾಡಿದ್ದರು. ಸಂಜೆ ಸುಮಾರು 06.30ರ ವೇಳೆ ಬಸ್ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಬಸ್ ಗೆ ಚಾಲನೆ ನೀಡುವ ವೇಳೆ ಉತ್ಸಾಹ ತಡೆದುಕೊಳ್ಳಲಾಗದ ರೇಣುಕಾಚಾರ್ಯ ಖಾಕಿ ಅಂಗಿ ಧರಿಸಿ, ಚಾಲಕನ ಸೀಟಿನ ಮೇಲೆ ಕುಳಿತು ಹೊನ್ನಾಳಿ ಪಟ್ಟಣದಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆ ಹಳ್ಳಿ ಗ್ರಾಮದವರೆಗೆ ಸುಮಾರು 58 ಕಿ. ಮೀಟರ್ ಖುದ್ದು ಬಸ್ ಚಲಾಯಿಸಿದ್ದರು. ಅಲ್ಲದೇ ನನಗೆ ಆತ್ಮವಿಶ್ವಾಸವಿದೆ. ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಬಸ್ ಓಡಿಸಿದೆ ಎಂದು ಹೇಳಿದ್ದರು.
undefined
ಖಾಕಿ ಅಂಗಿ ಧರಿಸಿ ಬಸ್ ಬಾರದ ಗ್ರಾಮಕ್ಕೆ ಬಸ್ ಓಡಿಸ್ಕೊಂಡು ಬಂದ ಹೊನ್ನಾಳಿ ಶಾಸಕ!
ಆದರೀಗ ಇದೇ ವಿಚಾರ ಹೊನ್ನಾಳಿ ಶಾಸಕನನಿಗೆ ಸಂಕಷ್ಟಕ್ಕೀಡು ಮಾಡಿದೆ. ರೇಣುಕಾಚಾರ್ಯ ಉತ್ಸಾಹದಿಂದ ಬಸ್ ಚಲಾಯಿಸುವ ಭರದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದು, ಇದೀಗ ಅವರ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಾಗಿದೆ. ಬಸ್ ಚಲಾಯಿಸಲು ಬೇಕಾದ ಲೈಸನ್ಸ್ ಇಲ್ಲದೇ ಶಾಸಕ ರೇಣುಕಾಚಾರ್ಯ ಮೊದಲ ತಪ್ಪೆಸಗಿದ್ದರೆ. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ, ಬೇರೆಲ್ಲಾ ಸಮಯದಲ್ಲೂ ಸರ್ಕಾರಿ ಬಸ್ ಚಾಲಕನೇ ಓಡಿಸಬೇಕಾದ ಬಸ್ಸನ್ನು 58 ಕಿ. ಮೀಟರ್ ಓಡಿಸಿ ಮತ್ತೊಂದು ನಿಯಮ ಉಲ್ಲಂಘಿಸಿದ್ದಾರೆ.
ಬೇಜವಾಬ್ದಾರಿಯುತ ಉತ್ತರ ಕೊಟ್ಟ ಶಾಸಕ
ಇನ್ನು ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತಾವು ತಪ್ಪೆಸಗಿದ್ದರೂ, ತಮ್ಮ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಎಂ. ಪಿ. ರೇಣುಕಾಚಾರ್ಯ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ದೂರವಾಣಿ ಮೂಲಕ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಹೊನ್ನಾಳಿ ಶಾಸಕ 'ಯಾರೋ ಕಾಂಗ್ರೆಸ್ ಕಿಡಿಗೇಡಿಗಳು ಕೇಸ್ ಹಾಕಿದ್ರೆ ನಾನು ಹೆದರಲ್ಲ. ನಮ್ಮ ಹಳ್ಳಿಗೆ ಬಸ್ ನೀಡಲು ಸಿಎಂಗೆ ಮನವಿ ಮಾಡಿದ್ದೆ. ಸಿಎಂ ಬಸ್ ವ್ಯವಸ್ಥೆ ಮಾಡಿದ್ದಾರೆ. ಜನರ ಪ್ರೀತಿಗಾಗಿ ನಾನೇ ಬಸ್ ಓಡಿಸಿಕೊಂಡು ಹೋಗಿದ್ದೇನೆ. ಯಾರ್ ಕೇಸ್ ಹಾಕ್ತಾರೋ ಹಾಕಲಿ. ನಾನು ಅದಕ್ಕೆಲ್ಲಾ ಜಗ್ಗಲ್ಲ ಬಗ್ಗಲ್ಲ. ಕಾಂಗ್ರೆಸ್ ನವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಯಾರದ್ದೋ ಮೂಲಕ ಕೇಸ್ ಹಾಕಿದ್ದಾರೆ. ಅವರು ನನ್ನ ಕ್ಷೇತ್ರಕ್ಕೆ ಬಹಿರಂಗ ಚರ್ಚೆಗೆ ಬರಲಿ. ಜನರು ನಾನು ಮಾಡಿದ್ದು ತಪ್ಪು ಅಂದ್ರೆ ಒಪ್ಕೊತೇನೆ' ಎಂದಿದ್ದಾರೆ.
ನೆರೆ ಸಂತ್ರಸ್ತರ ಮೇಲೆ ವಿಶೇಷ ಕಾಳಜಿಯ ಪೋಸು ಕೊಟ್ಟಿದ ರೇಣುಕಾಚಾರ್ಯ ಬಂಡವಾಳ ಬಯಲು!
KSRTC ಅಧಿಕಾರಿಗಳು ಹೇಳೋದೇನು?
ಶಾಸಕರ ಈ ನಡೆ ಕುರಿತು KSRTC ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, 'ಶಾಸಕರು ಲೈಸನ್ಸ್ ಇಲ್ಲದೇ ಬಸ್ ಚಲಾಯಿಸಿದ್ದು ತಪ್ಪು' ಎಂದು ಒಪ್ಪಿಕೊಂಡಿದ್ದಾರೆ. ನೀವ್ಯಾಕೆ ತಡೆಯಲಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ 'ಬಸ್‌ಗೆ ಚಾಲನೆ ಕೊಟ್ಟು ಸುಮ್ಮನಾಗಬಹುದು ಎಂದು ಭಾವಿಸಿದೆವು. ಆದರೆ ಶಾಸಕರು ಬಸ್ ಚಲಾಯಿಸಿ ಹೋಗಿದ್ದಾರೆ. ಶಾಸಕರನ್ನು ತಡೆಯುವುದಾದರೂ ಹೇಗೆ?' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹೊನ್ನಾಳಿ ಶಾಸಕನ ಈ ನಡೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಹಲವರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!
ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡಿದ್ದ ಡ್ರೈವರ್
ಈ ಹಿಂದೆ 2018ರಲ್ಲಿ ದಾವಣಗೆರೆಯಲ್ಲಿ ಬಸ್ ಚಾಲಕನೊಬ್ಬ ಮಂಗನ ಕೈಗೆ ಬಸ್ ಸ್ಟೇರಿಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದರು. ಆದರೆ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ KSRTC ಚಾಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಆಡಳಿತ ವರ್ಗ ಅವರನ್ನು ಅಮಾನತ್ತುಗೊಳಿಸಿತ್ತು ಎಂಬುವುದು ಉಲ್ಲೇಖನೀಯ.
ಪಾಕಿಸ್ತಾನದಲ್ಲೂ ನಮ್ ದಾವಣಗೆರೆ ಕೋತಿ ಫುಲ್ ಫೇಮಸ್ಸು!