ಹನಿಟ್ರ್ಯಾಪ್‌ಗೆ ಬಂದ ಯುವತಿ ಕಪಾಳಕ್ಕೆ ಬಾರಿಸಿದ್ದೆ: ರಾಜಣ್ಣ

Published : Apr 29, 2025, 05:56 AM ISTUpdated : Apr 29, 2025, 07:39 AM IST
ಹನಿಟ್ರ್ಯಾಪ್‌ಗೆ ಬಂದ ಯುವತಿ ಕಪಾಳಕ್ಕೆ ಬಾರಿಸಿದ್ದೆ: ರಾಜಣ್ಣ

ಸಾರಾಂಶ

‘ನನ್ನ ಮನೆಗೆ ಬಹುಮುಖ್ಯ ವಿಚಾರ ಮಾತನಾಡುವ ನೆಪದಲ್ಲಿ ಬಂದು ಏಕಾಏಕಿ ಕೈ ಹಿಡಿದೆಳೆದು ಹನಿಟ್ರ್ಯಾಪ್‌ಗೆ ಯತ್ನಿಸಿದ್ದ ಅಪರಿಚಿತ ಯುವತಿಯ ಕಪಾಳಕ್ಕೆ ಬಿಗಿದು ಕಳುಹಿಸಿದ್ದೇನೆ. ನನಗೆ ಆಕೆಯ ಮುಖ ಪರಿಚಯವಿಲ್ಲ. ತಿಳಿ ನೀಲಿಬಣ್ಣದ ಬಟ್ಟೆ ಧರಿಸಿದ್ದಳಷ್ಟೆ. ನೀವು (ಸಿಐಡಿ) ಹುಡುಕಿದರೆ ಸಿಗಬಹುದು.’

ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು

‘ನನ್ನ ಮನೆಗೆ ಬಹುಮುಖ್ಯ ವಿಚಾರ ಮಾತನಾಡುವ ನೆಪದಲ್ಲಿ ಬಂದು ಏಕಾಏಕಿ ಕೈ ಹಿಡಿದೆಳೆದು ಹನಿಟ್ರ್ಯಾಪ್‌ಗೆ ಯತ್ನಿಸಿದ್ದ ಅಪರಿಚಿತ ಯುವತಿಯ ಕಪಾಳಕ್ಕೆ ಬಿಗಿದು ಕಳುಹಿಸಿದ್ದೇನೆ. ನನಗೆ ಆಕೆಯ ಮುಖ ಪರಿಚಯವಿಲ್ಲ. ತಿಳಿ ನೀಲಿಬಣ್ಣದ ಬಟ್ಟೆ ಧರಿಸಿದ್ದಳಷ್ಟೆ. ನೀವು (ಸಿಐಡಿ) ಹುಡುಕಿದರೆ ಸಿಗಬಹುದು.’

- ತಮ್ಮ ಮೇಲಿನ ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇದು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಮುಂದೆ ನೀಡಿದ ಹೇಳಿಕೆ ಇದು.

ಮೂರು ದಿನಗಳ ಹಿಂದೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ಅಧಿಕೃತ ನಿವಾಸದಲ್ಲಿ ರಾಜಣ್ಣ ಅವರನ್ನು ವಿಚಾರಣೆಗೊಳಪಡಿಸಿ ಸಿಐಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಹನಿಟ್ರ್ಯಾಪ್ ಯತ್ನ ಕೃತ್ಯದ ಬಗ್ಗೆ ಖಚಿತವಾದ ಮಾಹಿತಿ ನೀಡದೆ ಸಚಿವರು ಅಸ್ಪಷ್ಟ ಹಾಗೂ ಗೊಂದಲಮಯ ವಿವರ ನೀಡಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ತಮ್ಮನ್ನು ಹನಿಟ್ರ್ಯಾಪ್‌ ಮಾಡಲು ಯತ್ನಿಸಲಾಗಿತ್ತು. ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಯುವತಿ ಜತೆ ಗಡ್ಡಧಾರಿ ಯುವಕನೊಬ್ಬ ಬಂದಿದ್ದ. ಆದರೆ ಅವರ್‍ಯಾರೂ ನನಗೆ ಪರಿಚಿತರಲ್ಲ. ನನ್ನ ಗೃಹ ಕಚೇರಿಯಲ್ಲಿ ಏಕಾಏಕಿ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ್ದರಿಂದ ವಿಚಲಿತನಾದೆ. ಆಗ ಆಕೆಯ ಕಪಾಳಕ್ಕೆ ಹೊಡೆದು ಕಳುಹಿಸಿದ್ದೇನೆ ಎಂದು ಸಚಿವರು ಹೇಳಿಕೆ ನೀಡಿರುವುದಾಗಿ ‘ಕನ್ನಡಪ್ರಭ’ಕ್ಕೆ ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 'ನನ್ನ ಗೌರವ ನಾನೇ ಕಾಪಾಡಿಕೊಳ್ತೇನೆ', ರಾಜಣ್ಣ ಗರಂ ಆಗಿದ್ದೇಕೆ?

ಕಳೆದ ವಿಧಾನಮಂಡಲ ಅಧಿವೇಶನದ ವೇಳೆ ಸದನದಲ್ಲೇ, ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಸಹಕಾರ ಸಚಿವ ರಾಜಣ್ಣ ಹೇಳಿದ್ದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಅವರು ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಹನಿಟ್ರ್ಯಾಪ್ ಯತ್ನ ಕುರಿತು ವಿಚಾರಣೆ ನಡೆಸುವಂತೆ ಸಿಐಡಿಗೆ ಸರ್ಕಾರ ಆದೇಶಿಸಿತ್ತು.
ಅಂತೆಯೇ ವಿಚಾರಣೆ ಕೈಗೆತ್ತಿಕೊಂಡಿರುವ ಸಿಐಡಿ, ಪ್ರಕರಣ ಸಂಬಂಧ ಮಂತ್ರಿ ರಾಜಣ್ಣ ಅವರ ಅಂಗರಕ್ಷಕರು (ಗನ್ ಮ್ಯಾನ್‌ಗಳು) ಹಾಗೂ ಆಪ್ತ ಸಹಾಯಕ (ಪಿಎ)ರು ಸೇರಿದಂತೆ ಕೆಲವರನ್ನು ಪ್ರಶ್ನಿಸಿದ್ದರು. ಅಲ್ಲದೆ ಸಚಿವರ ಮನೆಯಲ್ಲಿ ಸಿಸಿಟಿವಿ ಹಾಗೂ ಸಂದರ್ಶಕರ ನೋಂದಣಿ (ರಿಜಿಸ್ಟ್ರಾರ್‌) ಪುಸ್ತಕ ಸಹ ಇರಲಿಲ್ಲ. ಹೀಗಾಗಿ ಹನಿಟ್ರ್ಯಾಪ್ ಯತ್ನಕ್ಕೆ ಪುರಾವೆ ಸಿಗದೆ ಸಿಐಡಿಗೆ ಸವಾಲಾಗಿತ್ತು. 

ಈ ಹಿನ್ನೆಲೆಯಲ್ಲಿ ದೂರುದಾರರಾದ ಸಚಿವ ರಾಜಣ್ಣ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಲು ಅಧಿಕಾರಿಗಳು ನಿರ್ಧರಿಸಿದ್ದರು. ಅಂತೆಯೇ ಕಳೆದ ಶುಕ್ರವಾರ ಸಚಿವರನ್ನು ಅವರ ನಿವಾಸದಲ್ಲೇ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಆದರೆ ತಮ್ಮ ಆರೋಪಕ್ಕೆ ಪೂರಕ ಸಾಕ್ಷ್ಯ ನೀಡದೆ ಸಚಿವರು ಗೊಂದಲ ಮೂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಬಾರಿ ಬಂದಿದ್ರು ಎಂದ ಸಚಿವರು:
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನನ್ನ ಸರ್ಕಾರಿ ನಿವಾಸಕ್ಕೆ ಹನಿಟ್ರ್ಯಾಪ್ ದುರುದ್ದೇಶದಿಂದಲೇ ಎರಡು ಬಾರಿ ಅಪರಿಚಿತ ಯುವತಿಯರು ಬಂದಿದ್ದರು. ಪ್ರತಿ ಬಾರಿ ಬೇರೆ ಬೇರೆ ಯುವತಿಯರು ಬಂದಿದ್ದು, ಅ‍ವರೊಂದಿಗೆ ಗಡ್ಡಧಾರಿ ಹುಡುಗನಿದ್ದ. ನನಗೆ ಅವರ್‍ಯಾರ ಮುಖವೂ ಪರಿಚಯ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ ಎನ್ನಲಾಗಿದೆ.

ಮೊದಲ ಬಾರಿಗೆ ನನ್ನ ಭೇಟಿಗೆ ಬಂದಿದ್ದ ಯುವತಿ ಏನೋ ಮಾತನಾಡಬೇಕಿದೆ ಎಂದಿದ್ದಳು. ಆಗ ನನಗೆ ಸಮಯವಿಲ್ಲದ ಕಾರಣ ಆಕೆಯ ಬಗ್ಗೆ ಲಕ್ಷ್ಯ ಕೊಡಲಿಲ್ಲ. ಕೆಲ ಹೊತ್ತು ಕಾದು ಆಕೆ ಮರಳಿದ್ದಳು. ಇದಾದ ಕೆಲ ದಿನಗಳ ಬಳಿಕ ಮತ್ತೊಬ್ಬಳು ಬಂದಿದ್ದಳು. ಆಕೆ ಬಂದಾಗ ನನ್ನ ಗೃಹ ಕಚೇರಿಯಲ್ಲಿ ಕೆಲ ಸಾರ್ವಜನಿಕರು ಕೂಡ ಇದ್ದರು. ಅವರೆಲ್ಲ ತೆರಳಿದ ಬಳಿಕ ನನ್ನೊಂದಿಗೆ ಗೌಪ್ಯವಾಗಿ ಬಹುಮುಖ್ಯ ವಿಚಾರ ಮಾತನಾಡಬೇಕಿದೆ ಎಂದು ಆಕೆ ಕೋರಿದ್ದಳು. ಆಗ ಚೇಂಬರ್‌ ಗೆ ಕರೆದು ಮಾತನಾಡಿಸಿದೆ. ಆದರೆ ದಿಢೀರನೇ ನನ್ನ ಕೈ ಹಿಡಿದು ಎಳೆದು ಆಕೆ ಅಸಭ್ಯವಾಗಿ ವರ್ತಿಸಿದ್ದಳು. ಇದರಿಂದ ವಿಚಲಿತನಾದೆ. ಕೋಪದಲ್ಲಿ ಆಕೆಯ ಚಪಾಳಕ್ಕೆ ಹೊಡೆದು ಬೈದು ಕಳುಹಿಸಿದ್ದೇನೆ ಎಂದು ರಾಜಣ್ಣ ಹೇಳಿರುವುದಾಗಿ ತಿಳಿದು ಬಂದಿದೆ.

ಈ ಘಟನೆ ನಡೆದಾಗ ನನ್ನ ಮನೆಯಲ್ಲಿ ಸಿಬ್ಬಂದಿ ಮಾತ್ರವಲ್ಲದೆ ಪಕ್ಷದ ಮುಖಂಡರು ಹಾಗೂ ಕೆಲ ಸಾರ್ವಜನಿಕರು ಇದ್ದರು. ಆದರೆ ಅವರು ಆ ಯುವತಿಯನ್ನು ನೋಡಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಎರಡು ಬಾರಿ ಯುವತಿಯರು ಬಂದಿದ್ದಾಗಲೂ ಅವರ ಜತೆ ಗಡ್ಡಧಾರಿ ಯುವಕನೊಬ್ಬನಿದ್ದ. ಎರಡನೇ ಸಲ ಬಂದಿದ್ದವಳು ನೀಲಿ ಬಣ್ಣದ ಬಟ್ಟೆ ಧರಿಸಿದ್ದಳು. ನನಗೆ ಇಷ್ಟೇ ಮಾಹಿತಿ ಗೊತ್ತಿರೋದು. ನೀವು (ಸಿಐಡಿ) ಹುಡುಕಿದರೆ ಹನಿಟ್ರ್ಯಾಪ್‌ಗೆ ಯತ್ನಿಸಿದವರು ಸಿಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ರಾಜಣ್ಣ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಸಾಕ್ಷ್ಯ ಸಿಕ್ಕಿಲ್ಲ: ಪರಮೇಶ್ವರ್‌ಗೆ ಸಿಐಡಿ ಡಿಜಿಪಿ ವಿವರಣೆ

ಯುವತಿಯರು ಬಂದಿದ್ದ ದಿನ ಗೊತ್ತಿಲ್ಲ: ರಾಜಣ್ಣ

ನನ್ನ ಸರ್ಕಾರಿ ನಿವಾಸಕ್ಕೆ ಹನಿಟ್ರ್ಯಾಪ್‌ಗೆ ಯಾವ ದಿನ ಯುವತಿಯರು ಬಂದಿದ್ದರು ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಬಂದಿದ್ದಂತೂ ಸತ್ಯ. ಆದರೆ ಯಾವ ದಿನ ಎಂದು ಗೊತ್ತಿಲ್ಲ. ಅಲ್ಲದೆ ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಇಲ್ಲ ಎಂಬ ಸಂಗತಿ ಘಟನೆ ಬಳಿಕವೇ ತಿಳಿಯಿತು ಎಂದು ಸಚಿವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ