
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಏ.03): ಒಂದೆಡೆ ತಮ್ಮ ಆಪಾದನೆಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಸಾಕ್ಷ್ಯ ನೀಡದೆ, ಮತ್ತೊಂದೆಡೆ ಪೂರಕವಾದ ಪುರಾವೆಗಳು ಪತ್ತೆಯಾಗದೆ ಹನಿಟ್ರ್ಯಾಪ್ ಯತ್ನ ಪ್ರಕರಣವೆಂಬುದು ಸಿಐಡಿ ವಿಚಾರಣಾ ತಂಡಕ್ಕೆ ತಲೆನೋವಾಗಿ ಪರಿಣಿಸಿದೆ. ಹೀಗಾಗಿ, ಸಚಿವರ ಹೇಳಿಕೆ ಆಧರಿಸಿ ಮುಂದುವರೆಯಲು ಸಿಐಡಿ ನಿರ್ಧರಿಸಿದೆ ಎನ್ನಲಾಗಿದೆ. ಪ್ರಕರಣದ ಕುರಿತು ಸಿಐಡಿ ವಿಚಾರಣೆ ಕೈಗೆತ್ತಿಕೊಂಡು ವಾರ ಕಳೆದಿದ್ದು, ಈವರೆಗೆ ಹನಿಟ್ರ್ಯಾಪ್ ಗ್ಯಾಂಗ್‌ನ ಹೆಜ್ಜೆ ಗುರುತುಗಳು ಸಿಗದೆ ಅಧಿಕಾರಿಗಳು ಕೈ-ಕೈ ಹಿಸುಕಿಕೊಳ್ಳು ವಂತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ರಾಜಣ್ಣರವರನ್ನೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕ್ಕೆ ಸಿಐಡಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಸಂಬಂಧ ಬೆಂಗಳೂರಿನ ಜಯಮಹಲ್ ರಸ್ತೆಯ ಸಚಿವರ ಅಧಿಕೃತ ಸರ್ಕಾರಿ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಆ ಸರ್ಕಾರಿ ಮನೆಗೆ ಸಿಸಿಟಿವಿ ಕ್ಯಾಮರಾಗಳಿಲ್ಲ, ಸಂದರ್ಶಕರ ಪುಸಕ್ತವೂ ಇಲ್ಲ. ಹೀಗಾಗಿ ಸಚಿವರ ನಿವಾಸಕ್ಕೆ ಬಂದು ಹೋದವರ ಲೆಕ್ಕ ಸಿಗುತ್ತಿಲ್ಲ ಎಂದು ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ. ಇನ್ನು ಸಚಿವರ ಆಪ್ತ ಸಹಾಯಕ ಮಲ್ಲೇಶ್ ಹಾಗೂ ಗನ್ ಮ್ಯಾನ್ (ತುಮಕೂರು ಜಿಲ್ಲಾ ಸಶಸ್ತ್ರಮೀಸಲು ಪಡೆ ಕಾನ್‌ಸ್ಟೇಬಲ್) ಶ್ರೀಧರ್ ಅವರನ್ನು ವಿಚಾರಣೆ ನಡೆಸಲಾಯಿತು.
ತಮಗೆ ಹನಿಟ್ರ್ಯಾಪ್ ಯತ್ನ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಆ ಇಬ್ಬರು ಹೇಳಿಕೆ ನೀಡಿದ್ದಾರೆ. ಈಗ ಮತ್ತೆ ಸಚಿವರ ವಿಶೇಷಾಧಿಕಾರಿ ಹಾಗೂ ಮತ್ತೊಬ್ಬಗನ್ ಮ್ಯಾನ್ ಅವರಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದೇವೆ ಎಂದು ಮೂಲಗಳು ಹೇಳಿವೆ. ಪ್ರಕರಣ ಕುರಿತು ಬಾಯಿಬಿಡದಂತೆ ಸಚಿವರ ಕಚೇರಿ ಸಿಬ್ಬಂದಿಗೆ ಒತ್ತಡವಿದೆಯೇ ಅಥವಾ ಅವರಿಗೆ ನಿಜವಾಗಿಯೂ ಏನೂ ಗೊತ್ತಿಲ್ಲವೇ ಎಂಬುದು ಖಚಿತವಾಗುತ್ತಿಲ್ಲ. ಪ್ರತಿ ಹಂತದಲ್ಲೂ ವಿಚಾರಣೆಗೆ ಅಸಹಕಾರ ವ್ಯಕ್ತವಾಗುತ್ತಿದೆ. ಹೀಗಾಗಿ ಕೃತ್ಯ ನಡೆದಿದೆಯೇ ಎಂಬುದು ಖಾತ್ರಿಪಡಿಸಲು ಸಾಕ್ಷ್ಯ ಕಲೆ ಹಾಕುವುದು ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿ.ವೈ.ವಿಜಯೇಂದ್ರ ಆಮರಣಾಂತರ ಉಪವಾಸ ಕೈಗೊಳ್ಳಲಿ: ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ
ತಮ್ಮ ಕತೆಗೆ ಸಚಿವರೇ ಸಾಕ್ಷ್ಯ ಕೊಡಲಿ: ಹನಿಟ್ರ್ಯಾಪ್ ಯತ್ನ ಆರೋಪ ಸಂಬಂಧ ಪ್ರಾಥಮಿಕ ಹಂತವಾಗಿ ಸಚಿವರ ಸಿಬ್ಬಂದಿ ವಿಚಾರಣೆ ಹಾಗೂ ನಿವಾಸ ಪರಿಶೀಲನೆ ನಡೆಸಿ ಸಿಐಡಿ ಮಾಹಿತಿ ಕಲೆ ಹಾಕಿತು. ಆದರೆ ನಿರೀಕಿಸಿದ ಮಟ್ಟದಲ್ಲಿ ಪುರಾವೆಗಳು ಸಿಗದೆ ವಿಚಾರಣೆ ಕವಲು ದಾರಿಗೆ ಬಂದು ನಿಂತಿದೆ. ಹೀಗಾಗಿಯೇ ಆರೋಪದ ಬಗ್ಗೆ ಸಚಿವ ರಾಜಣ್ಣ ಅವರಿಂದಲೇ ವಿವರಣೆ ಪಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಬಾರಿ ಸಚಿವರ ವಿಚಾರಣೆಗೆ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಯುಗಾದಿ, ರಂಜಾನ್ ಹಬ್ಬ ಹಾಗೂ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಕಾರ್ಯಕ್ರಮ, ಈಗ ಮುಖ್ಯಮಂತ್ರಿಯವರ ಜತೆ ದೆಹಲಿ ಪ್ರವಾಸ ಹೀಗೆ ಸಚಿವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದಾರೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸಚಿವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದ ಬಳಿಕ ಗುರುವಂದನಾ ಮುಂದಿನ ಹೆಜ್ಜೆಯಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ