ರೆಡ್ಡಿ ಕೇಸ್ : ಸಿಎಂರಿಂದ ಖಡಕ್ ಅಧಿಕಾರಿಗಳ ನಿಯೋಜನೆ

By Web DeskFirst Published Nov 16, 2018, 7:24 AM IST
Highlights

ಗಣಿ ದಣಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇಕೆ ಸೇಡಿನ ರಾಜಕಾರಣ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಬೀದರ್‌ :  ‘ನಾನೇಕೆ ಸೇಡಿನ ರಾಜಕಾರಣ ಮಾಡಬೇಕು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಸೇಡಿನ ರಾಜಕಾರಣ ಮಾಡಿಲ್ಲ. ಮತ್ತೆ ಈಗೇಕೆ ಮಾಡಲಿ? ಸಾರ್ವಜನಿಕರ ಹಣವನ್ನು ಲಪಟಾಯಿಸಿರುವಂಥವರು ಯಾರೇ ಇದ್ದರೂ ಅವರ ಕುರಿತು ತನಿಖೆ ಮಾಡಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದ್ದೇನೆ.’

- ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬುಧವಾರ ಬಂಧಮುಕ್ತರಾದ ಬಳಿಕ ‘ನನ್ನನ್ನು ಬಂಧಿಸುವ ಮೂಲಕ ಮುಖ್ಯಮಂತ್ರಿಗಳು 12 ವರ್ಷಗಳ ಹಾವಿನ ದ್ವೇಷ ತೀರಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಕ್ಕೆ ಎಚ್‌.ಡಿ.ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆಯಿದು. ಈ ಸರ್ಕಾರ ತಪ್ಪು ಮಾಡಿದ ಯಾರಿಗೂ ರಕ್ಷಣೆ ಕೊಡುವಂಥ ಪ್ರಶ್ನೆ ಇಲ್ಲ. ಕಠಿಣ ಕ್ರಮ ಕೈಗೊಳ್ಳಲು ಅತ್ಯಂತ ಪ್ರಾಮಾಣಿಕ ಅಧಿಕಾರಿಗಳನ್ನು ಜವಾಬ್ದಾರಿಯುತ ಸ್ಥಾನಗಳಲ್ಲಿ ಇಟ್ಟಿದ್ದೇವೆ ಎಂದು ಖಡಕ್‌ ಆಗಿ ಹೇಳಿದ್ದಾರೆ.

ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರ ಬಗ್ಗೆ ನನ್ನತ್ರ ಚರ್ಚೆ ಮಾಡಬೇಡಿ. ಅಂಥವರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ ಎಂದು ಜನಾರ್ದನ ರೆಡ್ಡಿ ಹೆಸರೆತ್ತದೆ ಹೇಳಿದರು.

ಕ್ರಮಕ್ಕೆ ಸೂಚಿಸಿದ್ದೇವೆ: ಅಕ್ಟೋಬರ್‌ನಲ್ಲಿ ದೇವೇಗೌಡರ ಮುಂದೆ ಬಂದು ಆ್ಯಂಬಿಡೆಂಟ್‌ ಸಂತ್ರಸ್ತರು ಮನವಿ ಕೊಟ್ಟಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ಈ ಕಂಪನಿಯಿಂದ 600 ರಿಂದ 700 ಕೋಟಿ ರು. ವಂಚನೆಯಾಗಿರುವುದರ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಹಣ ಹೋಗಬೇಕಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

ಇನ್ನು ಆರೋಪಿಗಳು ಅಫಿಡವಿಟ್‌ನಲ್ಲಿ 18 ಕೋಟಿ ರು. ಪಡೆದಿದ್ದು ನಿಜ. ಆದರೆ, 10 ದಿನಗಳಲ್ಲಿ ವಾಪಸ್‌ ಕೊಡುತ್ತೇವೆ ಎಂದು ಹೇಳುವ ಮೂಲಕ ಕಳ್ಳತನ ಮಾಡಿರುವುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಇಲ್ಲಿ ಒಬ್ಬ ಕಳ್ಳ ತಾನು ಕಳ್ಳತನ ಮಾಡಿದ್ದೇನೆ ಅದನ್ನು ವಾಪಸ್‌ ಕೊಡ್ತೇನೆ ಕಾನೂನಿನ ರಕ್ಷಣೆ ಕೊಡಿ ಎಂದು ಕೇಳಿದಂತೆ, ಹೀಗೇ ಕೇಳಿದ್ರೆ ಕಾನೂನು ರಕ್ಷಣೆ ಕೊಡಕ್ಕಾಗುತ್ತಾ? ಇಂಥ ವ್ಯವಸ್ಥೆಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

click me!