ಮಂಗಳೂರು ಪೊಲೀಸರಿಗೆ ವರ್ಷದೊಳಗೆ 100 ವಸತಿಗೃಹ: ಗೃಹಸಚಿವ ಪರಮೇಶ್ವರ್ ಭರವಸೆ

Kannadaprabha News, Ravi Janekal |   | Kannada Prabha
Published : Feb 18, 2026, 09:43 AM IST
Home Minister Parameshwara Promises 100 New Quarters for Mangaluru Police Within a Year

ಸಾರಾಂಶ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿ, ನಗರ ಪೊಲೀಸ್‌ ಸಿಬ್ಬಂದಿಗೆ ಮುಂದಿನ ವರ್ಷದೊಳಗೆ 100 ಹೊಸ ವಸತಿಗೃಹಗಳನ್ನು ಮಂಜೂರು ಭರವಸೆ ನೀಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮತ್ತು ನಗರದ ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲೇ ಸ್ಥಳಾಂತರಿಸುವ ಬಗ್ಗೆಯೂ  ಮಾತನಾಡಿದರು.

ಮಂಗಳೂರು (ಫೆ.18): ಮಂಗಳೂರು ನಗರ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಮುಂದಿನ ವರ್ಷದೊಳಗೆ ಮತ್ತೆ 100 ವಸತಿಗೃಹ ಮಂಜೂರು ಮಾಡಿಸುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಭರವಸೆ ನೀಡಿದ್ದಾರೆ.ನಗರದ ಅತ್ತಾವರ ಪೊಲೀಸ್‌ ಲೇನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್‌ ಠಾಣೆ ಸಿಬ್ಬಂದಿಗೆ 12 ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಯ ಅಧಿಕಾರಿ- ಸಿಬ್ಬಂದಿಗೆ 54 ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ 1.10 ಲಕ್ಷ ಪೊಲೀಸರಿಗೆ ವಸತಿಗೃಹ ನಿರ್ಮಿಸುವುದು ನನ್ನ ಕನಸು ಎಂದು ಹೇಳಿದ ಡಾ.ಪರಮೇಶ್ವರ್‌, ಮಂಗಳೂರು ನಗರದಲ್ಲಿ ಸುಮಾರು 1,900 ಪೊಲೀಸರಿದ್ದು, ಅವರಲ್ಲಿ ಪ್ರಸ್ತುತ ಶೇ. 40 ಮಂದಿ ಮಾತ್ರ ವಸತಿಗೃಹಗಳನ್ನು ಹೊಂದಿದ್ದಾರೆ. 2030ರೊಳಗೆ ಎಲ್ಲರಿಗೂ ವಸತಿಗೃಹಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮಂಗಳೂರಿನಲ್ಲಿ ಎರಡು ಹೊಸ ಪೊಲೀಸ್‌ ಠಾಣೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹೊಸ ಠಾಣೆ ಮಂಜೂರಾತಿಗೆ ಕೇಂದ್ರ ಸರ್ಕಾರದ ಕೆಲವೊಂದು ನಿಯಮಗಳನ್ನು ಅನುಸರಿಸಿ ಮಂಜೂರಾತಿ ದೊರೆಯಬೇಕಿದೆ. ಹಳೆ ಕಟ್ಟಡಗಳ ಬದಲಿಗೆ ಹೊಸ ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕರಾವಳಿ ಭದ್ರತಾ ಪಡೆಯ 15 ಬೋಟ್‌ಗಳಲ್ಲಿ ಮೂರ್ನಾಲ್ಕು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆಯೂ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಡ್ರಗ್ಸ್‌ ನಿಯಂತ್ರಣ:

ಡ್ರಗ್ಸ್‌ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಬಿಗ್ರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿಯೂ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳು ನಡೆಯುತ್ತಿದ್ದು, ಡ್ರಗ್ಸ್‌ ಪೂರೈಕೆ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಡ್ರಗ್ಸ್‌ ನಿಯಂತ್ರಣದಲ್ಲಿ ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿರಿಸಿಕೊಂಡು ಈ ಪಿಡುಗಿನಿಂದ ಸಮಾಜವನ್ನು ಮುಕ್ತಗೊಳಿಸಲು ಸಾಧ್ಯವಾಗಲಿದೆ ಎಂದು ಗೃಹ ಸಚಿವರು ಸಲಹೆ ನೀಡಿದರು.

ರಾಜ್ಯದಲ್ಲಿ ಬೆಂಗಳೂರಿನ ಬಳಿಕ 2ನೇ ಪ್ರಮುಖ ನಗರವಾಗಿ ಬೆಳೆಯುವ ಎಲ್ಲ ಸಾಮರ್ಥ್ಯ, ಅವಕಾಶಗಳನ್ನು ಮಂಗಳೂರು ಹೊಂದಿದೆ. ಆದರೆ ಕೆಲ ಸಮಯದ ಹಿಂದೆ ಇಲ್ಲಿನ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಉಂಟಾಗಿತ್ತು. ಇದೀಗ ಅದೆಲ್ಲವೂ ಬದಲಾಗಿ ಗತಕಾಲದ ವೈಭವ ವಾಪಸ್‌ ಬರುವ ಸನ್ನಿವೇಶ ನೋಡುತ್ತಿದ್ದೇವೆ. ಸರ್ಕಾರವೂ ಅಭಿವೃದ್ಧಿ ಯೋಜನೆಗಳ ಸಂದರ್ಭ ಮಂಗಳೂರನ್ನು ಗಣನೆಗೆ ತೆಗೆದುಕೊಳ್ಳುತ್ತಿದೆ. ಜನ ಸಮುದಾಯದಲ್ಲೂ ಈ ಬಗ್ಗೆ ಅರಿವು ಮೂಡಿರುವಂತೆ ಕಾಣುತ್ತಿದೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನಗರದ ಎರಡು ಪೊಲೀಸ್‌ ಠಾಣೆಗಳು ಬಾಡಿಗೆ ಕಟ್ಟಡದಲ್ಲಿವೆ. ಜೈಲನ್ನು ಶೀಘ್ರ ಸ್ಥಳಾಂತರಿಸುವ ಮೂಲಕ ಸಮಸ್ಯೆ ನಿವಾರಿಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕರಾವಳಿ ಕಾವಲು ಪಡೆಯನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.

ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್‌ ಪಿಂಟೋ, ಸ್ಟ್ಯಾನಿ ಅಲ್ವಾರಿಸ್‌, ಎಂ.ಎ. ಗಫೂರ್‌, ಟಿ.ಎಂ. ಶಹೀದ್‌ ತೆಕ್ಕಿಲ್‌, ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌, ವಿಶೇಷ ಕಾರ್ಯಪಡೆಯ ಐಜಿಪಿ ಪ್ರಕಾಶ್‌ ಗೌಡ, ಗೃಹ ಇಲಾಖೆಯ ಎಂಜಿನಿಯರ್‌ ವೀರಭದ್ರಪ್ಪ, ಡಿಸಿಪಿ ರವಿಶಂಕರ್‌ ಮತ್ತಿತರರು ಇದ್ದರು. ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ಸ್ವಾಗತಿಸಿದರು. ಡಿಸಿಪಿ ಮಿಥುನ್‌ ವಂದಿಸಿದರು.ಪೊಲೀಸ್‌ ಸಿಬ್ಬಂದಿ ಮನೆಯಲ್ಲಿ ಹಾಲು- ಲಾಡು ಸೇವಿಸಿದ ಪರಮೇಶ್ವರ್‌

ಕಾರ್ಯಕ್ರಮ ಮುಗಿದ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಕಳೆದ ವರ್ಷ ಉದ್ಘಾಟನೆಗೊಂಡಿದ್ದ ವಸತಿ ಗೃಹವೊಂದಕ್ಕೆ ದಿಢೀರ್‌ ಭೇಟಿ ನೀಡಿದರು. ಸಿಎಆರ್‌ ಹೆಡ್‌ ಕಾನ್‌ಸ್ಟೆಬಲ್‌ ಭೀಮಪ್ಪ ಅವರ ಮನೆ ಅದಾಗಿದ್ದು, ಭೀಮಪ್ಪ ಅವರ ಪತ್ನಿ ಶ್ರುತಿ ಅವರು ಗೃಹ ಸಚಿವರಿಗೆ ಬಿಸಿ ಹಾಲು ಹಾಗೂ ಮನೆಯಲ್ಲಿ ತಯಾರಿಸಿದ ಶೇಂಗಾ ಲಾಡು ನೀಡಿದರು. ಅದನ್ನು ಸೇವಿಸಿದ ಡಾ.ಪರಮೇಶ್ವರ್‌ ಅವರು ಯೋಗಕ್ಷೇಮ ವಿಚಾರಿಸಿದರು.

ನಗರ ಮಧ್ಯೆ ಇರುವ ಜಿಲ್ಲಾ ಕಾರಾಗೃಹವನ್ನು ಆದಷ್ಟು ಶೀಘ್ರ ಹೊರವಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ನೂತನವಾಗಿ ನಿರ್ಮಾಣವಾಗುತ್ತಿರುವ ಕಾರಾಗೃಹಕ್ಕೆ ತಡೆಗೋಡೆ ನಿರ್ಮಿಸಲು 50 ಕೋಟಿ ರು. ಅಗತ್ಯವಿದೆ. ಬ್ಯಾರಕ್‌ಗಳನ್ನು ಈಗಾಗಲೇ ನಿರ್ಮಿಸಿರುವುದರಿಂದ ಜೈಲನ್ನು ಸ್ಥಳಾಂತರಿಸಬಹುದು. ಉಳಿದ ಒಳಾಂಗಣ ಕೆಲಸಗಳನ್ನು ನಂತರ ಕೈಗೊಳ್ಳಬಹುದು ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Valentine s Day Special : ಪ್ರೇಮಿಗಳ ದಿನಕ್ಕೆ ಬೆಂಗ್ಳೂರಿಂದ 6 ಕೋಟಿ ಗುಲಾಬಿ ರಫ್ತು!
ಆಡಳಿತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಾಂತಿ: ಇನ್ನು ಸರ್ಕಾರಕ್ಕೆ ದೂರು ನೀಡಿದರೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯೆ!