
ಅರಸೀಕೆರೆ, ಹಾಸನ (ಡಿ.2): ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಮುಂಜಾನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹಾರನಹಳ್ಳಿ ಕೋಡಿ ಮಠಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಚಿವರು ಮಠದ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಡಾ. ಪರಮೇಶ್ವರ್ ಅವರ ಈ ಭೇಟಿಯ ವಿಶೇಷತೆ ಏನೆಂದರೆ, ಅವರು ಯಾವುದೇ ರೀತಿಯ ಶಿಷ್ಟಾಚಾರವನ್ನು ಪಾಲಿಸಿಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕರು, ಶಾಸಕ ಕೆಎಂ ಶಿವಲಿಂಗೇಗೌಡರು, ಅಥವಾ ಸ್ವತಃ ತಮ್ಮದೇ ಇಲಾಖೆಯ ಪೊಲೀಸ್ ಸಿಬ್ಬಂದಿಗೂ ಈ ಕುರಿತು ಮುನ್ಸೂಚನೆ ನೀಡಿರಲಿಲ್ಲ. ಸಚಿವರು ಏಕಾಂಗಿಯಾಗಿ, ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಂಡು ಮಠಕ್ಕೆ ಭೇಟಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ರಾಜಕಾರಣದ ಪ್ರಮುಖ ಹುದ್ದೆಯಲ್ಲಿರುವ ಸಚಿವರು ಇಷ್ಟೊಂದು ರಹಸ್ಯವಾಗಿ ಮಠದ ಶ್ರೀಗಳನ್ನು ಭೇಟಿಯಾಗಿರುವುದು, ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆದಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಈ ಕುತೂಹಲದ ನಡುವೆಯೇ, ಕೋಡಿಮಠದ ಶ್ರೀಗಳು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಡಾ. ಜಿ. ಪರಮೇಶ್ವರ್ ಅವರು ಮಠದ ಒಬ್ಬ ಸಾಮಾನ್ಯ ಭಕ್ತರಾಗಿದ್ದಾರೆ. ಭಕ್ತಿಯ ಕಾರಣದಿಂದಾಗಿ ಅವರು ವೈಯಕ್ತಿಕವಾಗಿ ಭೇಟಿ ನೀಡಿದ್ದಾರೆ. ಇದೊಂದು ಧಾರ್ಮಿಕ ಭೇಟಿಯಾಗಿದ್ದು, ಇಲ್ಲಿ ಯಾವುದೇ ರೀತಿಯ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆದಿಲ್ಲ ಎಂದು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.
ಶ್ರೀಗಳ ಸ್ಪಷ್ಟನೆಯ ಹೊರತಾಗಿಯೂ, ಗೃಹ ಸಚಿವರ ಈ ಅನಿರೀಕ್ಷಿತ ಮತ್ತು ಗೌಪ್ಯ ಭೇಟಿ ಸ್ಥಳೀಯ ಮತ್ತು ರಾಜ್ಯ ರಾಜಕೀಯದಲ್ಲಿ ಚರ್ಚಾ ವಿಷಯವಾಗಿ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ