
ಮಂಡ್ಯ/ ನವದೆಹಲಿ (ಡಿ.2): ಬಿಸಿಯೂಟ ಯೋಜನೆ ನೌಕರರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಮಂಡ್ಯದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ನಡುವೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನೆ ಬಿಟ್ಟು ಮಾತುಕತೆಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕುಮಾರ್ ಅವರ ಮೂಲಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿ ಶ್ರೀಕುಮಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನೀವು ಚಳಿಯಲ್ಲಿ ರಸ್ತೆಯಲ್ಲಿ ಧರಣಿ ಕೂರುವುದು ಬೇಡ. ನಿಮ್ಮ ಸಂಘದ ಪ್ರತಿನಿಧಿಗಳಲ್ಲಿ ಹತ್ತು ಜನ ಪ್ರಮುಖರು ನವದೆಹಲಿಗೆ ಬನ್ನಿ. ನಾನೇ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಸಭೆ ಏರ್ಪಾಡು ಮಾಡಿಸುತ್ತೇನೆ. ನಾನೂ ನಿಮ್ಮ ಜತೆ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಧರಣಿಯನ್ನು ಕೊನೆಗೊಳಿಸಿ ದೆಹಲಿಗೆ ಬನ್ನಿ ಎಂದು ಕೋರಿದರು.
ನೀವು ಬಂದು ಹೋಗುವ ವಿಮಾನಯಾನ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುವೆ. ತಾಯಂದಿರುವ ಚಳಿಯಲ್ಲಿ ಬೀದಿಯಲ್ಲಿ ಇರುವುದು ಬೇಡ. ದಯಮಾಡಿ ಚರ್ಚೆಗೆ ಬನ್ನಿ ಎಂದು ಸಚಿವರು ವಿನಂತಿಸಿದರು.
ಸಚಿವರ ಮಾತಿಗೆ ಸ್ಪಂದಿಸಿದ ಶ್ರೀಕುಮಾರಿ ಅವರು, ಈ ಬಗ್ಗೆ ಸಂಘದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ ತಮಗೆ ತಿಳಿಸುವುದಾಗಿ ಹೇಳಿದರು. ದೂರವಾಣಿ ಮಾತುಕತೆ ನಡೆಸುವಾಗ ಅಂಗನವಾಡಿ ಕಾರ್ಯಕರ್ತೆಯರ ಜತೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರೂ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ