ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್‌ಗೆ ವಿಶೇಷ ಸೌಲಭ್ಯಗಳ ವರದಿಗಳ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜೈಲುಗಳ ವ್ಯವಸ್ಥೆಗಳ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರು (ಆ.27): ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್‌ಗೆ ವಿಶೇಷ ಸೌಲಭ್ಯಗಳನ್ನು ಕೊಡಲಾಗಿದೆ ಎಂಬ ವರದಿ ಬೆನ್ನಲ್ಲಿಯೇ, ರಾಜ್ಯದ ಎಲ್ಲ ಜೈಲುಗಳ ವ್ಯವಸ್ಥೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದೀಖಾನೆ ಪ್ರಾಧಿಕಾರವು ಕೋರ್ಟ್‌ನ ನಿರ್ದೇಶನದ ಮೇರೆಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದೆ. ವಿಚಾರಣಾದೀನ ಕೈದಿಯಾಗಿರುವುದರಿಂದ ಕೆಲವು ನಿಯಮಗಳ ಪ್ರಕಾರವೇ ಸ್ಥಳಾಂತರ ಮಾಡಬೇಕಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರ ಆಗಬಹುದು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಬದಲಾವಣೆ ಮಾಡಬಹುದು. ಆದರೆ, ಮೂರು ಭಾಗ ಮಾಡಲು ಆಗುವುದಿಲ್ಲ. ಬ್ಲಾಕ್ 1, ಬ್ಲಾಕ್ 2 ಬ್ಲಾಕ್ 3 ಇವೆ. ಅದರ ಜೊತೆಗೆ ಬೇರೆ ಬ್ಯಾರಕ್‌ಗಳಿವೆ. ಇದರಲ್ಲಿ ಕೈದಿಗಳನ್ನು ಇರಿಸಲು ಮಾರ್ಪಾಡು ತರಬಹುದು, ಭಾಗ ಮಾಡುವುದಿಲ್ಲ ಎಂದು ತಿಳಿಸಿದರು.
ನಟಿ ಪದ್ಮಜಾ ರಾವ್‌ಗೆ ಜೈಲು ಶಿಕ್ಷೆ: ಚೆಕ್ ಬೌನ್ಸ್ ಆರೋಪ ಸಾಬೀತು
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬುವನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಎಂಬುದು ನಿನ್ನೆ ಭೇಟಿ ನೀಡಿದ ವೇಳೆ ಗೊತ್ತಾಗಿದೆ. ಈ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕನನ್ನು ಅಮಾನತು ಮಾಡಿದ್ದೇವೆ. ಈ ಸ್ಥಳಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದರು.
ಕಾರಾಗೃಹದಲ್ಲಿ ದರ್ಶನ್‌ಗೆ ಯಾರೆಲ್ಲ ಸಹಕಾರ ಕೊಟ್ಟಿದ್ದಾರೋ ಅವರನ್ನು ಅಮಾನತು ಮಾಡಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ. ಹೆಚ್ಚಿನ ತನಿಖೆಗಾಗಿ ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಈ ಹಿಂದೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ 2020ರಲ್ಲಿ ಜೈಲು ಸುಧಾರಣೆಗೆ, ವರದಿ ನೀಡಿರುವುದು ನಿನ್ನೆ ಗಮನಕ್ಕೆ ಬಂದಿದೆ. ಅದನ್ನು ತರಿಸಿಕೊಂಡು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ರಾಷ್ಟ್ರಮಟ್ಟದಲ್ಲಿ ಪೊಲೀಸ್ ಸುಧಾರಣೆ, ಕಾರಾಗೃಹ ಸುಧಾರಣೆಗೆ ವರದಿ ನೀಡಲಾಗಿತ್ತು. ಆ ವರದಿಯನ್ನು ತರಿಸಿಕೊಳ್ಳಲಾಗುವುದು. ಈಗಿನ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುವುದು. ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆಯನ್ನು ಮಾತ್ರ ತನಿಖೆ ನಡೆಸುತ್ತಿಲ್ಲ. ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಏನೆಲ್ಲ ನಡೆಯುತ್ತಿದೆ. ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗುವುದು. ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತರಿಸಿಕೊಳ್ಳಲಾಗುವುದು. ಹಿಂಡಲಗಾ ಜೈಲಿಗೆ ಭೇಟಿ ನೀಡಿದಾಗ ಕೆಲವು ಲೋಪದೋಷಗಳು ಕಂಡುಬಂದಿತ್ತು. ಕ್ರಮ ಕೈಗೊಳ್ಳಲಾಗಿತ್ತು. ಶಿವಮೊಗ್ಗ, ಮಂಗಳೂರು ಕಾರಾಗೃಹ ಎಲ್ಲವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಶೀಘ್ರದಲ್ಲೇ ಪರಪ್ಪನ ಅಗ್ರಹಾರ ಜೈಲು ಮೂರು ಹೋಳು? ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಸರ್ಕಾರ ಮುಂದು
ಸಾಕ್ಷಿಗಳನ್ನು ಹೆದರಿಸುವ ನಿಟ್ಟಿನಲ್ಲಿ ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಾಕ್ಷಿಗಳನ್ನು ಹೆದರಿಸುವ ಅಗತ್ಯ ನಮಗಿಲ್ಲ. ನ್ಯಾಯಯುತವಾಗಿ ಯಾರಿಗೆ ಏನು ಶಿಕ್ಷೆ ಆಗಬೇಕು. ಯಾರಿಗೆ ನ್ಯಾಯ ಸಿಗಬೇಕು. ನ್ಯಾಯಯುತವಾಗಿ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ. ಇದರಲ್ಲಿ ರಾಜಕೀಯ ಲಾಭ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.