ಬಿಗ್ ಬಾಸ್ ರೀ ಓಪನ್‌ ಗೆ ಡಿಕೆಶಿ ಕಾರಣ, ಸಂಪುಟ ವಿಸ್ತರಣೆ ಗುಟ್ಟು ಬಿಚ್ಚಿಟ್ಟ ಗೃಹಸಚಿವ ಪರಮೇಶ್ವರ್!

Published : Oct 09, 2025, 12:24 PM IST
Home Minister Parameshwara

ಸಾರಾಂಶ

ಬಿಗ್ ಬಾಸ್ ಕಾರ್ಯಕ್ರಮದ ಅನುಮತಿ ವಿವಾದದ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ವರದಿ ಕೇಳಿರುವುದಾಗಿ ತಿಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯು ಹೈಕಮಾಂಡ್ ನಿರ್ಧಾರವಾಗಿದ್ದು, ಸಿಎಂ ಆಯೋಜಿಸಿರುವ ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಜಿಲ್ಲಾ ಆಡಳಿತಕ್ಕೆ ನೀಡಿದ ಸೂಚನೆ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ವಿಷಯದ ಸಂಪೂರ್ಣ ಮಾಹಿತಿ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಾನು ಈ ಸಂಬಂಧವಾಗಿ ಇಲಾಖೆಯಿಂದ ವಿವರ ಕೇಳಿದ್ದೇನೆ. ನಮ್ಮ ಇಲಾಖೆಯಲ್ಲಿ ಏನು ನಡೆದಿದೆ ಎಂಬ ಮಾಹಿತಿ ಕೋರಿದ್ದೇನೆ. ಇಂದೇ ಈ ವಿಚಾರ ಮುಖ್ಯಮಂತ್ರಿ ಅವರ ಗಮನಕ್ಕೂ ಹೋಗಲಿದೆ. ಸಿಎಂ ಅವರು ಈ ವಿಷಯದಲ್ಲಿ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಡಿಕೆಶಿ ಅವರು ಯಾವ ಕಾರಣಕ್ಕಾಗಿ, ಯಾವ ಹಿನ್ನೆಲೆಯಲ್ಲಿಯೇ ಸೂಚನೆ ನೀಡಿದ್ದಾರೆ ಎಂಬುದು ನನಗೂ ಇನ್ನೂ ತಿಳಿದಿಲ್ಲ. ನಾವು ವಿಚಾರಣೆ ನಡೆಸಿ, ಅಗತ್ಯವಾದ ವರದಿ ಪಡೆಯುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಸ್ಪಷ್ಟನೆ

ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ನಡೆಯಲಿದೆ ಎಂಬ ಊಹಾಪೋಹಗಳ ಮಧ್ಯೆ ಮಾತನಾಡಿದ ಪರಮೇಶ್ವರ್, “ನಾನು ನಿನ್ನೆ ಹೇಳಿದಂತೆಯೇ, ಇದು ನಮ್ಮ ಹಂತದಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಸಚಿವ ಸಂಪುಟ ವಿಸ್ತರಣೆ ಅಥವಾ ಬದಲಾವಣೆ ಕುರಿತ ನಿರ್ಧಾರವು ಸಂಪೂರ್ಣವಾಗಿ ಹೈಕಮಾಂಡ್ ಹಂತದಲ್ಲಿ ನಡೆಯುತ್ತದೆ. ನನಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಯಾವ ಮೂಲದಿಂದ ಈ ರೀತಿಯ ಸುದ್ದಿಗಳು ಹೊರಬರುತ್ತಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

“ಪುರರ್ ರಚನೆ ಆಗಲಿದೆ ಎಂದು ಯಾರು ಹೇಳಿದ್ದಾರೆ ಎಂಬುದೂ ಗೊತ್ತಿಲ್ಲ. ಕೆಲ ಹೆಸರುಗಳು ಮಾಧ್ಯಮಗಳಲ್ಲಿ ಚರ್ಚೆಗೆ ಬಂದಿವೆ. ಆದರೆ ಸಿಎಂ ಅವರು ಯಾವ ದಿನಾಂಕದಲ್ಲಿ ವಿಸ್ತರಣೆ ಅಥವಾ ಬದಲಾವಣೆ ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ,” ಎಂದು ಅವರು ಹೇಳಿದರು.

ವಾಲ್ಮೀಕಿ ಸಮುದಾಯದವರು ಸಚಿವ ಸಂಪುಟದಲ್ಲಿ ತಮ್ಮ ಸಮುದಾಯದವರಿಗೆ ಅವಕಾಶ ನೀಡುವಂತೆ ಒತ್ತಾಯ ವ್ಯಕ್ತಪಡಿಸಿರುವ ಕುರಿತು ಅವರು ಹೇಳಿದರು: “ಹೌದು, ವಾಲ್ಮೀಕಿ ಸಮುದಾಯದವರು ಸಚಿವ ಸ್ಥಾನಕ್ಕಾಗಿ ಒತ್ತಾಯ ವ್ಯಕ್ತಪಡಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೈಕಮಾಂಡ್ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಒಂದು ವೇಳೆ ಹೈಕಮಾಂಡ್ ಅದೇ ರೀತಿಯ ನಿರ್ಧಾರ ಕೈಗೊಂಡರೆ ಯಾರಿಗೂ ಅದನ್ನು ತಡೆಯಲು ಸಾಧ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು.

ಸಚಿವರಿಗೆ ಸಿಎಂ ಡಿನ್ನರ್ ವಿಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಚಿವರಿಗೆ ಊಟದ ಕಾರ್ಯಕ್ರಮ ಆಯೋಜಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ “ಅದು ಯಾವುದೇ ರೀತಿಯ ವಿಶೇಷ ಹಿನ್ನೆಲೆಯ ಊಟವಲ್ಲ. ಸಿಎಂ ಅವರು ನಿಯಮಿತವಾಗಿ ಸಚಿವರು ಮತ್ತು ಶಾಸಕರನ್ನು ಊಟಕ್ಕೆ ಆಹ್ವಾನಿಸುತ್ತಾರೆ. ಇದು ಹೊಸದಾಗಿಲ್ಲ. ಊಟದ ಕಾರ್ಯಕ್ರಮವನ್ನು ಸಚಿವ ಸಂಪುಟ ಪುನರ್ರಚನೆಗೆ ಸಂಬಂಧಿಸಿದೆ ಎಂದು ಹೇಳುವುದು ಸರಿಯಲ್ಲ. ಸರ್ಕಾರದ ಒಳಗಿರುವ ವಿಶ್ವಾಸದ ವಿಷಯದಲ್ಲಿ ಯಾವುದೇ ಅನುಮಾನವೇ ಇಲ್ಲ. ವಿಶ್ವಾಸಕ್ಕೆ ಊಟ ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲ ಎಂದು ಅವರು ನಗೆಯೊಂದಿಗೆ ಪ್ರತಿಕ್ರಿಯಿಸಿದರು.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ, ಸಚಿವ ಸಂಪುಟ ವಿಸ್ತರಣೆ ಮತ್ತು ಹೈಕಮಾಂಡ್ ತೀರ್ಮಾನಗಳ ಕುರಿತಂತೆ ಉಂಟಾಗಿರುವ ರಾಜಕೀಯ ಚರ್ಚೆಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತ ನಿರ್ಧಾರ ಸಂಪೂರ್ಣವಾಗಿ ಹೈಕಮಾಂಡ್ ಹಂತದಲ್ಲೇ ನಡೆಯುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಇದೇ ವೇಳೆ, ಸಿಎಂ ಆಯೋಜಿಸಿರುವ ಊಟದ ಕಾರ್ಯಕ್ರಮವನ್ನು ರಾಜಕೀಯ ತೀರ್ಮಾನಗಳ ಜೊತೆ ಕೊಂಡು ನೋಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!