
ಬೆಂಗಳೂರು : ‘ನಾನು ನೀವು ಕೊಡುವ ಅಂಕಿ-ಅಂಶಗಳ ಡೇಟಾ ನೋಡಲು ಬಂದಿಲ್ಲ. ರಾಷ್ಟ್ರಮಟ್ಟದಲ್ಲಿ ಇಲಾಖೆಯ ಮರ್ಯಾದೆ ಹರಾಜು ಹಾಕಿದ್ದೀರಿ’ ಎಂದು ಕಾರಾಗೃಹ ಅಧಿಕಾರಿಗಳ ಮೇಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೆಂಡಾಮಂಡಲವಾಗಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಸೌಲಭ್ಯ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಚಿವರು ಸಭೆ ನಡೆಸಿದರು. ಈ ಸಭೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿಗಳನ್ನು ಸಚಿವರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
‘ನಾನು ನೀವು ಕೊಡುವ ಅಂಕಿ-ಅಂಶಗಳ ಡೇಟಾ ನೋಡಲು ಬಂದಿಲ್ಲ. ರಾಷ್ಟ್ರಮಟ್ಟದಲ್ಲಿ ಇಲಾಖೆಯ ಗೌರವ ಹಾಳಾಗಿದೆ. ಈಗ ಬಂದು ಹಳೇ ವಿಡಿಯೋ ಎಂದು ಸಬೂಬು ಹೇಳುತ್ತಿದ್ದೀರಿ. 2023ರಲ್ಲಾಯ್ತು, 2024ರಲ್ಲಾಯ್ತು ಅಂತ ಹೇಳ್ತೀರಿ. ಆಗ ಯಾಕಾಯ್ತು ಅಂತ ಉತ್ತರ ಕೊಡಿ’ ಎಂದು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.
ಜೈಲುಗಳಲ್ಲಿ ಶೋಧ ಕಾರ್ಯ ನಡೆಸಿದಾಗ ಏನೂ ಸಿಕ್ಕಿಲ್ಲ ಅಂತ ಹೇಳ್ತಿರಿ. ಈಗ ಅದೆಲ್ಲ ಹೇಗೆ ಒಳಗಡೆ ಹೋಯ್ತು. ನಿಮಗೆ ನಾಚಿಕೆ ಆಗೋದಿಲ್ಲವೇ? 2023ರ ಜೂನ್-ಜುಲೈನಲ್ಲಿ ಜೈಲು ಸೂಪರಿಂಟಿಂಡೆಂಟ್ ಯಾರು ಇದ್ದರು? ರೌಡಿ ನಾಗ ತಾನೇ ವೀಡಿಯೋ ರೆಕಾರ್ಡ್ ಮಾಡಿರುವುದಾಗಿ ಪ್ರಕರಣವೊಂದರಲ್ಲಿ ಒಪ್ಪಿಕೊಂಡಿದ್ದಾನೆ. ಆತನಿಗೆ ಎರಡು ಮೊಬೈಲ್‌ಗಳು ಹೇಗೆ ಸಿಕ್ಕಿತು? ಲಿಕ್ಕರ್, ಫೋನ್, ಪೆನ್ ಕ್ಯಾಮೆರಾ ಹೇಗೆ ಹೋಯ್ತು ಎಂದು ಸಚಿವರು ಖಾರವಾಗಿ ಕೇಳಿದರು ಎನ್ನಲಾಗಿದೆ.
ಜೈಲಿನಲ್ಲಿ ನಿಷೇಧಿತ ವಸ್ತುಗಳಿಗೆ ನಿರ್ಬಂಧಿಸಿದ್ದರೆ ಈ ರಗಳೆ ಎಲ್ಲ ಇರುತ್ತಿರಲಿಲ್ಲ. ಆದರೆ ನಿಮ್ಮ ಅಸಮರ್ಥ ಕಾರ್ಯನಿರ್ವಹಣೆ ಪರಿಣಾಮ ಮೊಬೈಲ್, ಸಿಗರೇಟು ಹೀಗೆ ಎಲ್ಲವೂ ಕೈದಿಗಳಿಗೆ ಸಿಗುವಂತಾಗಿದೆ. ಒಂದೇ ಪ್ರವೇಶ ದ್ವಾರದಲ್ಲಿ ಏನೆಲ್ಲ ಹೋಗುತ್ತೆ? ಏನು ಹೋಗಲ್ಲ ಅನ್ನುವುದನ್ನು ಗುರುತಿಸಲು ಆಗುವುದಿಲ್ಲವೇ? ದಿಸ್ ಈಸ್ ಟೂ ಮಚ್. ಇದರಲ್ಲಿ ಅಧಿಕಾರಿಗಳ ಕೈವಾಡ ಇಲ್ಲವೇ ನೀವೇ ಹೇಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ