
ಬೆಂಗಳೂರು (ನ.10) ಜೆಡಿಎಸ್ ಪಕ್ಷಕ್ಕೆ 25ರ ಸಂಭ್ರಮ. ಇದರ ಹಿನ್ನಲೆಯಲ್ಲಿ ಜೆಡಿಎಸ್ ಸತತ ಸಭೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ ವೇಳೆ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಕುರಿತು ನಡೆದ ಮಹತ್ವದ ಸಭೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ಪುನರ್ ರಚನೆ ಮಾಡಲಾಗಿದೆ. ಈ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಜಿಟಿಡಿಗೆ ಶಾಕ್ ನೀಡಲಾಗಿದೆ.
ಜೆಡಿಎಸ್ ಪಕ್ಷದ 25ರ ಸಂಭ್ರಮದಲ್ಲಿ ಪ್ರಮುಖರ ಸಮಿತಿ (ಕೋರ್ ಕಮಿಟಿ) ರಚಿಸಿದೆ. ಪಕ್ಷದಿಂದ ದೂರ ಸರಿದಿರುವ ಹಾಗೂ ಕಾಂಗ್ರೆಸ್ ಜೊತೆ ಪದೇ ಪದೇ ಕಾಣಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಹೊಗಳುತ್ತಿರುವ ಜಿಟಿ ದೇವೇಗೌಡರಿಗೆ ಶಾಕ್ ನೀಡಲಾಗಿದೆ. ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ಹೊರಡಿಸಿರುವ ಕೋರ್ ಕಮಿಟಿಯ್ಲಿ ಜಿಟಿ ದೇವೇಗೌಡಗೆ ಸ್ಥಾನವಿಲ್ಲ. ಈ ಮೊದಲಿನ ಜೆಡಿಎಸ್ ಕೋರ್ ಕಮಿಟಿಯಲ್ಲಿ ಪ್ರಮುಖರಾಗಿದ್ದ ಜಿಟಿಡಿ ಈ ಬಾರಿ ಹೊರಬಿದ್ದಿದ್ದಾರೆ.
ಮಾಜಿ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿಗೆ ಕೋರ್ ಕಮಿಟಿ ನೂತನ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಪಕ್ಷ ಹೊಸ ರೀತಿಯಲ್ಲಿ ಕೆಲಸ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕೆಲ ಸಮಿತಿ ರಚನೆ ಆಗಿದೆ. ಎಲ್ಲಾ ಕೋರ್ ಕಮಿಟಿ ಸದಸ್ಯರು, ಅಧ್ಯಕ್ಷರಿಗೆ ಹೆಚ್‌ಡಿ ಕುಮಾರಸ್ವಾಮಿ ಪ್ರಮುಖ ಜವಾಬ್ದಾರಿಗಳನ್ನು ಹಂಚಿದ್ದಾರೆ. ಇದೇ ವೇಳೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಾರೆ.
ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿಗೂ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. HD ಕುಮಾರಸ್ವಾಮಿ ಅವರು ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ HD ದೇವೇಗೌಡರು ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಶಿಸ್ತುಪಾಲನಾ ಸಮಿತಿ, ಪ್ರಚಾರ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲಾಗಿದೆ. ಶಿಸ್ತುಪಾಲನಾ ಸಮಿತಿ ಅಧ್ಯಕರಾಗಿ ಮಾಜಿ ಸಚಿವ ಶ್ರೀ ಡಿ. ನಾಗರಾಜಯ್ಯ ಆಯ್ಕೆ ಮಾಡಲಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಶ್ರೀ ವೈ ಎಸ್ ವಿ ದತ್ತ ಅವರನ್ನು ನೇಮಕ ಮಾಡಲಾಗಿದೆ. ಹೆಚ್‌ಡಿ ಕುಮಾರಸ್ವಾಮಿ ಹಾಗೂ ಹೆಚ್‌ಡಿ ದೇವೇಗೌಡರು ಎಲ್ಲಾ ಸಮಿತಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ 25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 22 ರಂದು ಸಾಂಕೇತಿಕವಾಗಿ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಮಾಡುತ್ತೇವೆ. ನಂತರ ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದಾರೆ. ದೇವೇಗೌಡರ ಸಾಧನೆ, ನಾನು ಎರಡು ಬಾರಿ ಸಿಎಂ ಆಗಿದ್ದಾಗ ಮಾಡಿದ ಕಾರ್ಯಕ್ರಮಗಳನ್ನ ಜನರಿಗೆ ನೆನಪು ಮಾಡಿಕೊಡುವ ಕಾರ್ಯಕ್ರಮ ಮಾಡುತ್ತೇವೆ. ಜನವರಿವರೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ