
ಬೆಂಗಳೂರು(ಫೆ.28): ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಎಫ್‌ಎಸ್‌ಎಲ್‌ನವರು ವೈಜ್ಞಾನಿಕ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಇಂದು(ಬುಧವಾರ) ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ. ಜಿ.ಪರಮೇಶ್ವರ ಅವರು, ಘಟನೆಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟಿಂಗ್ ಮಾಡಿದ್ದಾರೆ. 'ನಾಸೀರ್ ಸಾಬ್ ಜಿಂದಾಬಾದ್' ಎಂದು ಹೇಳಲಾಗಿದೆ ಅಂತ ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು 'ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರು' ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.
ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ; ನಿನ್ನೆ ಏನೇನಾಯ್ತು? ಹೇಗಾಯ್ತು?
ಈಗಾಗಲೇ ಎಫ್‌ಎಸ್‌ಎಲ್‌ನವರು ಪರೀಶೀಲನೆ ಕೈಗೊಂಡಿದ್ದಾರೆ. ಎಲ್ಲ ವೀಡಿಯೋ ತುಣುಕುಗಳನ್ನು ಸಂಗ್ರಹಿಸುತ್ತಿದ್ದಾರೆ. ಅಧಿಕೃತವಾಗಿ ಸುದ್ದಿ ವಾಹಿನಿಯಲ್ಲಿ ಮೊದಲು ಪ್ರಸಾರವಾದ ವೀಡಿಯೋಗಳನ್ನು ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ. ವೈಜ್ಞಾನಿಕವಾಗಿ ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿಜೆಪಿಯವರು ಕೊಟ್ಟಿರುವ ದೂರನ್ನು ಸುಮೋಟೋ ಜತೆ ಸೇರಿಸಲಾಗುವುದು ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಎಲ್ಲವನ್ನು ಪರಿಶೀಲನೆ ನಡೆಸಲಾಗುತ್ತಿವೆ. ಘೋಷಣೆ ಕೂಗಿದರೂ ಎನ್ನಲಾದ ಸ್ಥಳದಲ್ಲಿ ಯಾರಿದ್ರು ಅನ್ನುವುದನ್ನು ಗುರುತಿಸಿ, ಅವರನ್ನು ವಿಚಾರಣೆ ನಡೆಸಲಾಗುತ್ತೆದೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಏನೆಲ್ಲ ಕಾನೂನು ರೀತ್ಯ ಕ್ರಮ ಜರುಗಿಸಬೇಕೊ ಅದು ಆಗುತ್ತದೆ. ಯಾವುದೇ ಕಾರಣಕ್ಕೂ ರಾಜೀ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾಕ್ ಪರ ಘೋಷಣೆ ಕೂಗಿದವರು ಯಾವ ಪಕ್ಷದವರಾದ್ರೂ ಶಿಕ್ಷೆ ಆಗಬೇಕು: ಸಂತೋಷ್ ಲಾಡ್
ಯಾರೋ ಒಬ್ಬ ಮಾಡಿದ್ದನೆಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತಳುಕು ಹಾಕುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮಾಡಿ, ವರದಿ ಆಧರಿಸಿ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದು ಆಗುತ್ತದೆ. ಬಿಜೆಪಿ ಪಕ್ಷ ಶೂರವಾದಗಿನಿಂದಲೂ 'ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ' ಎಂದು ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷ ಏನು ತಪ್ಪು ಮಾಡಿದೆ ಎಂದು ಪ್ರಶ್ನಿಸಿದರು.
ಆತ್ಮಸಾಕ್ಷಿ ಪರ ಎಸ್.ಟಿ ಮತ:
ಬಿಜೆಪಿಯರ ಪ್ರತಿಭಟನೆ ತಪ್ಪು ಅಂತ ಹೇಳುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲಿ. ಸದನದ ಒಳಗೆ ಪ್ರತಿಭಟಿಸುವುದಾದರೆ ಸ್ಪೀಕರ್ ಅನುಮತಿ ಬೇಕಾಗುತ್ತದೆ ಎಂದರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಆತ್ಮಸಾಕ್ಷಿ ಪರ ಮತ ಹಾಕುವುದಾಗಿ ಹೇಳಿದ್ದರು. ಅದರಂತೆ ಮಾತಿನ ಪ್ರಕಾರ ಮತ ಚಲಾಯಿಸಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಘೋಷಣೆ ಕೂಗಲು ಮೊದಲೇ ಪ್ಲಾನ್ ಮಾಡಿ ಬರಲಾಗಿತ್ತಾ..?
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲು ಮೊದಲೇ ಪ್ಲಾನ್ ಮಾಡಿ ಬರಲಾಗಿತ್ತಾ..? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಸದ್ಯ ವಿಡಿಯೋಗಳಲ್ಲಿ ಒಂದು ಬಾರಿ, ಎರಡು ಬಾರಿ ನಾಸೀರ್ ಸಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ. ಅದರ ಮಧ್ಯೆ ಯಾರಿಗೂ ಗೊತ್ತಾಗಲ್ಲ ಅಂತ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಯ ಧ್ವನಿ ಕೇಳಿಬರ್ತಿದೆ .
ಸೇಫ್ ಗೇಮ್ ಆಡಲು ಆರೋಪಿಗಳುಈ ರೀತಿ ಘೋಷಣೆ ಕೂಗಿದ್ರಾ?, ನಾಸೀರ್ ಹುಸೇನ್ ಜಿಂದಾಬಾದ್ ಮಧ್ಯೆ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರೇ ಯಾರಿಗೂ ಗೊತ್ತಾಗಲ್ಲ ಅಂದ್ಕೊಂಡು ಘೋಷಣೆ ಕೂಗಿದ್ರಾ? ಎಂಬ ಚರ್ಚೆ ಆರಂಭವಾಗಿದೆ.
ಇಬ್ಬರು ವ್ಯಕ್ತಿಗಳು ಏಕಕಾಲದಲ್ಲಿ ಎರಡು ಘೋಷಣೆ ಕೂಗಿರೋದು ಪತ್ತೆಯಾಗಿದೆ. ಇಬ್ಬರು ವ್ಯಕ್ತಿಗಳ ಜೊತೆ ಇನ್ನು ಇಬ್ಬರು-ಮೂವರು ಘೋಷಣೆ ಕೂಗಿರೋದು ವಿಡಿಯೋದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ಬಳಿಕ ಸ್ಪಷ್ಟತೆ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ