ಮುರುಘಾ ಶ್ರೀ ಬಂಧಿಸಲು ವಿಳಂಬವೇಕೆ? ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

By Suvarna NewsFirst Published Aug 29, 2022, 4:40 PM IST
Highlights

ಮುರುಘಾ ಮಠ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ, (ಆಗಸ್ಟ್.29) : ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರರದುರ್ಗ ಪೊಲೀಸರು ತನಿಖೆ ನಡೆಸಿದ್ದಾರೆ. ಮತ್ತೊಂದೆಡೆ ಪೋಕ್ಸೋ ದಾಖಲಾದ ಮೇಲೆ ಶ್ರೀಗಳನ್ನ ಇನ್ನೂ ಯಾಕೆ ಅರೆಸ್ಟ್ ಮಾಡಿಲ್ಲ ಎನ್ನುವ ಪ್ರಶ್ನೆಗಳು ಕೇಳಿಬಂದಿವೆ. ಇನ್ನು ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು(ಸೋಮವಾರ) ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,‌  ಚಿತ್ರದುರ್ಗ ಮುರುಘಾ ಮಠ ಶ್ರೀಗಳ ಬಗ್ಗೆ ಕೇಳಿ ಬಂದಿರುವ ಆರೋಪ ಕುರಿತು ವಿಶೇಷವಾಗಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ದೂರು, ಪ್ರತಿದೂರು ದಾಖಲಾಗಿದೆ. ಈ ಹಂತದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ಶ್ರೀಗಳ ಬಂಧನ ಇದುವರೆಗೂ ಆಗಿಲ್ಲ. ತನಿಖೆಯಲ್ಲಿ‌ ಯಾವುದೇ ವಿಳಂಬವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಅನಗತ್ಯ ವಿಳಂಬಕ್ಕೆ ಅವಕಾಶ ಇಲ್ಲ.‌ ಏನು ನಿಯಮವಿದೆ ಆ ನಿಯಮದ ಪ್ರಕಾರ ಪೊಲೀಸರು ಕೆಲಸ ಮಾಡುತ್ತಾರೆ.‌ ಮುಕ್ತವಾಗಿ ತನಿಖೆ ಆಗುತ್ತದೆ. ಇದರಲ್ಲಿ ಯಾರ ಕೈವಾಡವು ಇಲ್ಲ.‌ ಶ್ರೀಗಳು ಎಲ್ಲಿಯೂ ಹೋಗಿಲ್ಲ. ಕಾನೂನು ಸಲಹೆ ಪಡೆಯಲು ತೆರಳಿದ್ದರು. ಈಗಾಗಲೇ ಅವರೇ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದರು.

ವದಂತಿಗಳನ್ನು ನಂಬಬೇಡಿ, ಸಂಕಟದಿಂದ ಪಾರಾಗಿ ಬರುತ್ತೇನೆ: ಮುರುಘಾ ಶ್ರೀ

ಇದು ಬಹಳ ಸೂಕ್ಷ್ಮವಾದ ವಿಚಾರ. ಈ ಬಗ್ಗೆ ಇನ್ನೇನು ಹೆಚ್ಚಿಗೆ ಹೇಳುವುದಿಲ್ಲ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ‌. ತನಿಖೆ ನಡೆದ ನಂತರ ಸತ್ಯ ಏನೆಂಬುದು ಹೊರಬರುತ್ತದೆ ಎಂದು ಹೇಳಿದರು.

ಘಟನೆ
ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜ್ಯದ ಪ್ರತಿಷ್ಠಿತ ಮಠವೊಂದರಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಮುರುಘಾ ಮಠದ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

 ಶ್ರೀಗಳ ಲೈಂಗಿಕ ಕಿರುಕುಳದಿಂದ‌ ಬೇಸತ್ತ ಮಕ್ಕಳು ರಾಜಧಾನಿ ಬೆಂಗಳೂರಿಗೆ ಬಂದು ಅಲ್ಲಿ ದೂರು ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗದಿದ್ದಾಗ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು‌ ಮುಂದಾಗಿದ್ದರು. ಆದರೆ ಒಬ್ಬರು ಆಟೋ ಚಾಲಕ ಅವರಿಗೆ ಸಹಾಯ ಮಾಡಿ, ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಇದೀಗ ದೂರು ದಾಖಲಿಸಿದ್ದಾರೆ.

ಶಿವಮೂರ್ತಿ ಶರಣರು ಸೇರಿ ಐವರ ವಿರುದ್ದ ದೂರು ದಾಖಲಾಗಿದೆ. ಉಳಿದ ನಾಲ್ವರು ಲೈಂಗಿಕ ದೌರ್ಜನ್ಯ ವೆಸಗಲು ಸ್ವಾಮೀಜಿಗೆ ಸಹಾಯ ಮಾಡುತ್ತಿದ್ದರು. ನಮ್ಮ‌ ಬಳಿ ದೂರು ಬರುತ್ತಿದ್ದಂತೆ, ಬಹಳಷ್ಟು ಒತ್ತಡಗಳು ಬಂದಿವೆ. ನಾವು ಅದಾವುದನ್ನೂ ಲೆಕ್ಕಿಸದೆ ಮಕ್ಕಳಿಗೆ ನ್ಯಾಯ ಒದಗಿಸಲಷ್ಟೇ ಹೆಜ್ಜೆ ಇಟ್ಟಿದ್ದೇವೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದೇವೆ. ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣ ನ್ಯಾಯಾಧೀಶರ ಮೂಲಕವೇ ತನಿಖೆ ಆಗಬೇಕು. ಸ್ವಾಮೀಜಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ. ಮಕ್ಕಳು ಅಷ್ಟು ದೂರದಿಂದ ಇಲ್ಲಿಗೆ ಬಂದಿರೋದೆ‌ ನ್ಯಾಯ ಸಿಗುತ್ತೆ ಎಂಬ ಭರವಸೆಯಿಂದ. ಈ ಕಾರಣಕ್ಕಾಗಿ ಮಕ್ಕಳ ಜೊತೆ ನಾವಿದ್ದೇವೆ ಎಂದು ಒಡನಾಡಿ ಸಂಸ್ಥೆ ತಿಳಿಸಿದೆ. 

click me!