ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತನಾಡಿದ್ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು, ವದಂತಿಗಳನ್ನಾಗಿ ಊಹಾಪೋಹಗಳನ್ನಾಗಲಿ ಯಾರೂ ನಂಬಬೇಡಿ. ಈ ಸಂಕಷ್ಟದಿಂದ ನಾನು ಪಾರಾಗಿ ಬರುತ್ತೇನೆ ವಿಶ್ವಾಸದಿಂದ ಇರಿ ಎಂದು ಹೇಳಿದ್ದಾರೆ.
ಬೆಂಗಳೂರು (ಆ. 29): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದನ್ನು ಮಠ ಸಂಪೂರ್ಣವಾಗಿ ತಿರಸ್ಕರಿಸಿತ್ತು. ಇದರ ಬೆನ್ನಲ್ಲಿಯೇ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತನಾಡಿದ ಮುರುಘಾ ಮಠದ ಶ್ರೀಗಳು, ಯಾವುದೇ ಕಾರಣಕ್ಕೂ ವದಂತಿಗಳನ್ನು, ಊಹಾಪೋಹಗಳನ್ನು ನಂಬಬೇಡಿ. ಖಂಡಿತವಾಗಿ ಈ ಸಂಕಷ್ಟದಿಂದ ಪಾರಾಗಿ ಬರುತ್ತೇನೆ ಎಂದು ಹೇಳಿದರು.
ಧಾರವಾಡದಲ್ಲಿ ವಕೀಲರನ್ನು ಭೇಟಿಯಾಗಿ ಮಠಕ್ಕೆ ಆಗಮಿಸಿದ ಬೆನ್ನಲ್ಲಿಯ ಭಕ್ತರು ಅವರ ಪರವಾಗಿ ಘೋಷಣೆ, ಜೈಕಾರ ಹಾಕಿದರು. ಬಳಿಕ ಮಠದ ಎದುರಿಗೆ ಇದ್ದ ಲಿಫ್ಟ್‌ನ ಮೂಲಕ, ಮೇಲ್ಛಾವಣಿಯ ಮಹಡಿಗೆ ತೆರಳಿದ ಮುರುಘಾ ಶ್ರೀಗಳು, ಮಾಧ್ಯಮಗಳು ಹಾಗೂ ಭಕ್ತರನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಮಾತನಾಡಿದರು. ಆರೋಪಗಳಿಂದ ಹೊರಗೆ ಬರುತ್ತೇನೆ. ಈ ಅಹಿತಕರ ಘಟನೆಯಿಂದ ಹೊರಗೆ ಬರುತ್ತೇನೆ. ಮುರುಘಾ ಮಠದ ವಿರುದ್ಧ ಪಿತೂರಿ ನಡೆಯುತ್ತಿದೆ. ಕಲೆದ 15 ವರ್ಷಗಳಿಂದಲೂ ಈ ರೀತಿಯ ಪಿತೂರಿ ನಡೆಯುತ್ತಿದೆ. ಇಲ್ಲಿಯವರೆಗೂ ಪಿತೂರಿ ಒಳಗಿನಿಂದ ನಡೆಯುತ್ತಿದ್ದರೆ, ಈಗ ಹೊರಗಿನಿಂದಲೂ ನಡೆಯುತ್ತಿದೆ ಎಂದು ಮುರುಘಾ ಶ್ರೀಗಳು ಹೇಳಿದ್ದಾರೆ.
ಭಕ್ತರೆಲ್ಲರೂ ಶಾಂತ ರೀತಿಯಿಂದ ಇರಬೇಕು. ಕಳೆದ 15 ವರ್ಷಗಳಿಂದ ಈ ನೋವನ್ನು ಕಾಣುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಮ್ಮ ಮೇಲೆ ಮಾಡುತ್ತಿರುವ ಪಿತೂರಿ ಬಹಿರಂಗವಾಗಿದೆ. ಅದಲ್ಲದೆ, ನಾನೆಂದೂ ಪಲಾಯನ ಮಾಡುವುದಿಲ್ಲ. ಈ ನೆಲದ ಕಾನೂನನ್ನು ಶ್ರದ್ಧೆಯಿಂದ ಗೌರವಿಸುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ.
ಮುರುಘಾ ಮಠ ಶ್ರೀ ಪೋಕ್ಸೋ ಕೇಸ್, ಭಾನುವಾರ ಏನೆಲ್ಲಾ ಬೆಳವಣಿಗೆಗಳು ನಡೆದವು, ಇಲ್ಲಿದೆ ಮಾಹಿತಿ
ಗಾಳಿ ಸುದ್ದಿ ನಂಬದಂತೆ ಭಕ್ತರಿಗೆ ಹೇಳಿದ್ದೇನೆ. ಯಾರೂ ಸಹ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಮ್ಮ ನೋವಿನಲ್ಲಿ ಜನರೂ ಭಾಗಿಯಾಗಿರುವುದಿಂದ ಧೈರ್ಯ ಬಂದಂತಾಗಿದೆ. ಈ ಕೆಲದ ಕಾನೂನನ್ನು ಗೌರವಿಸುವ ಮಠಾಧೀಶರು, ಪೀಠಾಧೀಶರು ನಾವಾಗಿದ್ದೇವೆ. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಎಲ್ಲಾ ರೀತಿಯ ಸಹಕಾರವನ್ನೂ ನೀಡುತ್ತೇವೆ. ನಾನು ಪಲಾಯನ ಮಾಡೋದೇ ಇಲ್ಲ. ನಾವು ಗಟ್ಟಿತನದ ಮೇಲೆ, ಗಟ್ಟಿಸ್ಥರದ ಮೇಲೆ ಈ ರೀತಿಯಾದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಮುಖಾಂತರವಾಗಿ ಶ್ರೀಮಠದ ಅಸಂಖ್ಯಾತ ಭಕ್ತರು ಅಭಿಮಾನಿಗಳು ಯಾವುದೇ ರೀತಿಯಾಗಿ ಊಹಾಪೋಹಗಳಿಗೆ ಕಿವಿಗೊಡಬಾರದು. ಗಾಳಿ ಸುದ್ದಿಯನ್ನು ನಂಬಬಾರದು ಎಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ನಾವು ನ್ಯಾಯದ ಸ್ಥಾನದಲ್ಲಿದ್ದೇವೆ. ಗುರುಗಳ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿ ಕೆಲಸ ಮಾಡಿದೆ. ಇವತ್ತಿಗೂ ಕೂಡ ನಾವು ಎಲ್ಲಾ ಜನಾಂಗದವರಿಗೆ, ಎಲ್ಲಾ ವರ್ಗದವರಿಗೆ, ವಿದ್ಯಾರ್ಥಿ ಸಮುದಾಯವನ್ನು ಮೊದಲು ಮಾಡಿಕೊಂಡು, ಎಲ್ಲರಿಗೂ ನಾವು ಅತ್ಯಂತ ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಂಥ ಸಂದರ್ಭಗಳಿವೆ. ಏನೋ ಒಂದು ಅಹಿತಕರವಾದ ಸಂದರ್ಭವಾಗಿದೆ. ಅನರೋಗ್ಯಕರವಾದ ಸಂದರ್ಭವಿದೆ.ಆ ದಿಸೆಯಲ್ಲಿ ನಾವುಗಳು ಅದರಿಂದ ಹೊರಬಂದೇ ಬರುತ್ತೇವೆ ಎಂದರು.
ಮರುಘಾ ಶ್ರೀಗಳು ನಾಪತ್ತೆಯಾಗಿಲ್ಲ, ಬಂಧನವೂ ಆಗಿಲ್ಲ: ಮಠ
ಪ್ರಕರಣ ಹೊರ ರಾಜ್ಯಕ್ಕೆ ವರ್ಗಾಯಿಸುವಂತೆ ಒತ್ತಾಯ: ಈ ನಡುವೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಈ ಕುರಿತಾಗಿ ಪತ್ರ ಬರೆದಿದ್ದು, ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾಯಿಸುವಂತೆ ಹೇಳಿದ್ದಾರೆ. ಪ್ರಕರಣದಲ್ಲಿ ರಾಜಕೀಯ ಒತ್ತಡ ಬಂದಲ್ಲಿ ಮಾತ್ರವೇ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಹೇಳಿದ್ದೇನೆ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ್ದೇ ನಿರ್ಧಾರ ಎಂದು ಹೇಳಿದ್ದಾರೆ.