
- ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಫೆ.23) : ಹಲಸೂರಿನ ಹೆಸರಾಂತ ಐತಿಹಾಸಿಕ ಸೋಮೇಶ್ವರ ದೇವಾಲಯ ಬೆಂಗಳೂರಿನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು. ಚೋಳರ ಕಾಲದ ವಾಸ್ತುಶಿಲ್ಪಕ್ಕೆ ಹೆಸರಾಗಿರುವ ದೇವಾಲಯಕ್ಕೆ ಪುರಾಣದ ಉಲ್ಲೇಖಗಳಿದೆ. ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ಮಾತ್ರವಲ್ಲದೆ ವಿದೇಶಿ ಭಕ್ತರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ ಈಗ ಈ ದೇವಾಲಯ ಹಲವು ವಿವಾದಗಳ ಗೂಡಾಗಿದೆ. ಅದರಲ್ಲೂ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸದೆ ನಡೆಸಲಾದ ಕುಂಭಾಭಿಷೇಕ ಸ್ಥಳೀಯರ ವಿರೋಧಕ್ಕೂ ಕಾರಣವಾಗಿದೆ.
ಏನಿದು ವಿವಾದ?
ಹಿಂದೂಗಳ ನಂಬಿಕೆ ಪ್ರಕಾರ ಮಹಾ ಕುಂಭಾಭಿಷೇಕ ನಡೆಸಬೇಕಾದರೆ ಹಲವು ಕಟ್ಟುಪಾಡುಗಳಿವೆ. ದೇವಸ್ಥಾನದ ಸಂಪೂರ್ಣ ನವೀಕರಣ ಸಾಧ್ಯವಾಗದಿದ್ದರೂ ಯಾವುದೇ ಲೋಪಗಳು ಇರದಂತೆ ಸಿದ್ದಗೊಳಿಸಬೇಕು ಎಂಬುದು ಪ್ರಾಥಮಿಕ ನಿಯಮ. ಆದರೆ ದೇವಸ್ಥಾನದ ವಿಮಾನಗೋಪುರ, ರಾಜಗೋಪುರದಲ್ಲಿ ಅಲ್ಲಲ್ಲಿ ಮೂರ್ತಿಗಳು ಮುರಿದ ಸ್ಥಿತಿಯಲ್ಲಿ ಇವೆ. ಅವುಗಳ ಮೇಲೆ ಬರೀ ವರ್ಣಲೇಪನ ಮಾಡಿ ಕುಂಭಾಭಿಷೇಕ ಮಾಡಿದ್ದಾರೆ ಅನ್ನೋದು ಸ್ಥಳೀಯರ ಆರೋಪ. ಇದರ ಜೊತೆಗೆ ದೇವರ ಗರ್ಭಗುಡಿ ಸೇರಿದಂತೆ ಕಲ್ಲಿನ ಮೇಲ್ಚಾವಣಿಯೂ ದುರಸ್ಥಿಯಾಗಿಲ್ಲ. ಅವೆಲ್ಲಾ ಮುರಿದ ಸ್ಥಿತಿಯಲ್ಲಿರುವಾಗ ಕುಂಭಾಭಿಷೇಕ ಹೇಗೆ ಮಾಡಿದರು ಅನ್ನೋದು ಸ್ಥಳೀಯರ ಪ್ರಶ್ನೆ.
ದೇಗುಲಗಳ ಹಣ ನುಂಗಲು ರಾಹುಲ್ ಗಾಂಧಿ ಸಿದ್ಧ: ರಾಜೀವ್ ಚಂದ್ರಶೇಖರ್ ಆಕ್ರೋಶ
ಕಮಿಷನರ್ ಆದೇಶ ಉಲ್ಲಂಘಿಸಿದರೇ ಸ್ಥಳೀಯ ಅಧಿಕಾರಿಗಳು?
ಹಲಸೂರಿನ ಸೋಮೇಶ್ವರ ದೇವಾಲಯದಲ್ಲಿ ಫೆಬ್ರವರಿ 19ರಂದು ಕುಂಭಾಭಿಷೇಕ ನಿಗದಿಯಾಗುತ್ತಿದ್ದಂತೆ ಸ್ಥಳೀಯರು ವಿರೋಧ ಆರಂಭಿಸಿದ್ದರು. ಇದಾಗ್ಯೂ ಕುಂಭಾಭಿಷೇಕಕ್ಕೆ ಭರದ ಸಿದ್ದತೆ ಆರಂಭಗೊಂಡಿತ್ತು. ಆ ಬಳಿಕ ಸ್ಥಳೀಯರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಬೆನ್ನಲ್ಲೆ ಕಮಿಷನರ್ ಕುಂಭಾಭಿಷೇಕಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ಮಾಡಿದ್ದರು. ಇದಾಗ್ಯೂ ಹಠಕ್ಕೆ ಬಿದ್ದಂತೆ ಸ್ಥಳೀಯ ಅಧಿಕಾರಿಗಳು ಕುಂಭಾಭಿಷೇಕ ಮಾಡಿ ಮುಗಿಸಿದ್ದಾರೆ....!
ಸ್ಥಳೀಯರ ಆತಂಕಕ್ಕೆ ಕಾರಣವೇನು?
ಕುಂಭಾಭಿಷೇಕದಂತಹ ವಿಚಾರ ಇಡೀ ಊರಿಗೆ ಸಂಬಂಧಿಸಿದ್ದಾಗಿದೆ. ಒಂದು ವೇಳೆ ಇಲ್ಲಿ ಲೋಪವಾದರೆ ಅದರ ಪರಿಣಾಮ ಸ್ಥಳೀಯರ ಮೇಲಾಗುತ್ತದೆ. ಮೇಲಾಗಿ ಕಳೆದ ಹದಿನೈದು ವರ್ಷಗಳಿಂದ ಹಲಸೂರು ಸೋಮೇಶ್ವರನಿಗೆ ದೊಡ್ಡ ಉತ್ಸವಗಳನ್ನು ನಡೆಸಿಲ್ಲ. ಈ ರೀತಿಯಾಗಿ ಲೋಪಯುಕ್ತ ಪೂಜೆ ಊರಿಗೆ ಕೇಡು ಉಂಟು ಮಾಡಬಹುದು ಅಂತಾರೆ ಸ್ಥಳೀಯರಾದ ಚಂದ್ರು.
ದೇವಸ್ಥಾನದಲ್ಲಿರುವ ಲೋಪಗಳ ಬಗ್ಗೆ ಸ್ಥಳೀಯರ ಆರೋಪಗಳೇನು?
ದೇವಾಲಯ ಪೂರ್ತಿಯಾಗಿ ನವೀಕರಣಗೊಂಡಿಲ್ಲ, ಆಗಮಶಾಸ್ತ್ರದ ಪ್ರಕಾರ ದುಸ್ಥಿತಿಯಲ್ಲಿರುವ ದೇವಾಲಯದಲ್ಲಿ ಕುಂಭಾಭಿಷೇಕ ಮಾಡುವಂತಿಲ್ಲ. ಅರ್ಥಾತ್ ದೇವಸ್ಥಾನದ ವಿಮಾನ ಗೋಪುರದಲ್ಲಿ ಈಗಲೂ ಹಲವು ಮೂರ್ತಿಗಳು ಮುರಿದ ಸ್ಥಿತಿಯಲ್ಲಿವೆ. ಯಾಗ ಮಂಟಪ ಹೊಸ ಜಾಗದಲ್ಲಿ ಮತ್ತೆ ನಿರ್ಮಾಣವಾಗುತ್ತಿದೆ. ಗರ್ಭಗುಡಿಯ ಗೋಡೆ ಬಿರುಕು ಬಿಟ್ಟಿದ್ದು ಪ್ರಾಚೀನ ಕಲ್ಲುಗಳು ಸ್ಥಿತಿ ಬದಲಿಸಿವೆ.
ಇನ್ನು ದೇವಸ್ಥಾನದ ಸುತ್ತ ನಿರ್ಮಿಸಿದ ಗೋಡೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಇನ್ನೊಂದು ಭಾಗದ ಗೋಡೆ ಒತ್ತುವರಿಯವರ ಕಪಿಮುಷ್ಟಿಗೆ ಸಿಕ್ಕಿ ಮತ್ತೆ ಹೊಸದಾಗಿ ಕಟ್ಟಲ್ಪಟ್ಟಿದೆ. ಮೂಲ ಮಂಟಪದ ಮೇಲೆ ಮುಕ್ಕಾಲು ಇಂಚು ಸಿಮೆಂಟ್ ಟೈಲ್ಸ್ ನೆಲ ತಲೆ ಎತ್ತಿದ್ದು ಮೂಲ ಸೌಂದರ್ಯವನ್ನೇ ಕೆಡಿಸಿದೆ. ಕಲ್ಲಿನ ಮೂರ್ತಿಗಳು ಸ್ಪಷ್ಟವಾಗಿ ಕಾಣಬೇಕು ಅಂತ ನಡೆಸಿದ ಸ್ಯಾಂಡ್ ಬ್ಲಾಸ್ಟ್ ಎನ್ನುವ ಕೆಮಿಕಲ್ ಪರೀಕ್ಷೆಗೆ ಬಹುತೇಕ ಕಲ್ಲಿನ ಮೂರ್ತಿಗಳು ಸೂಕ್ಷ್ಮತೆ ಕಳೆದುಕೊಂಡಿದೆ. ದೇವಸ್ಥಾನದ ಪೌಳಿಯ ಒಳಭಾಗದಲ್ಲಿ ಗಬ್ಬು ನಾರುವ ಡ್ರೈನೇಜ್ ನೀರು ಹರಿಯುವುದಕ್ಕೆ ಒಂದು ತೆರೆದ ಸಣ್ಣ ಕಾಲುವೆ ನಿರ್ಮಿಸಿದ್ದು ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತಾಗಿದೆ.
ಎಂದಿಗೂ ಬತ್ತದ ಕಲ್ಯಾಣಿ ಇಲ್ಲಿಯವರೆಗೆ ಯಾವುದೇ ಬರಗಾಲದಲ್ಲೂ ಬತ್ತಿ ಹೋಗಿಲ್ಲ, ಆದರೆ ಅದರ ಸ್ವಚ್ಚತೆ ಬಗ್ಗೆ, ನಿರ್ವಹಣೆ ಬಗ್ಗೆ ಎಲ್ಲೂ ಮಾತಿಲ್ಲ, ಕಥೆಯಿಲ್ಲ.. ಇದೆಲ್ಲದರೆಡೆಯಲ್ಲಿ ಈ ಪ್ರಾಚೀನ ವಿಗ್ರಹಗಳಿಗೆ ಪೇಂಟ್ ಕೊಡುವ ಮೂಲಕ ಆಧುನಿಕತೆಯ ಸ್ಪರ್ಶವನ್ನು ಕೊಡಲಾಗಿದೆ. ಅನೇಕರ ಬಳಿ ಡೊನೇಶನ್ ಕೇಳಿ ನಿರ್ಮಿಸಿದ ಬೆಳ್ಳಿ ರಥದಲ್ಲೂ ಅಕ್ರಮ ನಡೆದಿದೆಯಂತೆ. ಇಷ್ಟೆಲ್ಲಾ ಮಾಡಿ ನಿರ್ಮಿಸಿದ ಬೆಳ್ಳಿರಥ ಎಳೆಯುವುದಕ್ಕೂ ಜಾಗ ಸರಿ ಇಲ್ಲ... ಅದೂ ಮೂಲೆಗುಂಪು. ಸಾಲು ಸಾಲು ಎಡವಟ್ಟುಗಳ ನಡುವೆ ಈಗ ಕುಂಭಾಭಿಷೇಕ. ಈ ಕುಂಭಾಭಿಷೇಕ ನಮ್ಮ ಒಳಿತಿಗಿಂತ ಕೆಡುಕಿಗೇ ಕಾರಣವಾಗುತ್ತೆ ಅನ್ನುವ ಭಯದಲ್ಲಿಸ್ಥಳೀಯರಿದ್ದಾರೆ.
ಸಿದ್ದರಾಮಯ್ಯರಿಂದ ಹಿಂದೂ ವಿರೋಧಿ ಬಜೆಟ್; ದೇಗುಲ ಅನುದಾನ ಕಡಿತ, ವಕ್ಫ್ ಅನುದಾನ ಹೆಚ್ಚಳ : ಆರ್ ಅಶೋಕ್
ಐತಿಹಾಸಿಕವಾಗಿ ದೇವಾಲಯಗಳನ್ನು ಗಮನಿಸಿದರೆ ದೇವಾಲಯದ ಉಳಿವಿಗೆ ಆಯಾ ಕಾಲಘಟ್ಟದಲ್ಲಿ ರಾಜಾಶ್ರಯದ ಕೊಡುಗೆ ಎಷ್ಟಿದೆಯೋ ಸ್ಥಳೀಯರದ್ದೂ ಅಷ್ಟೇ ಇದೆ. ಸ್ಥಳಿಯ ಭಕ್ತರು ಹೋರಾಡಿ ದೇವಸ್ಥಾನಗಳನ್ನು ಉಳಿಸಿಕೊಂಡ ಉದಾಹರಣೆ ಸಾಕಷ್ಟಿದೆ. ಹೀಗಿದ್ದಾಗ ಸ್ಥಳೀಯರನ್ನು ಇಲಾಖೆಯ ಅಧಿಕಾರಿಗಳು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಅನ್ನೋದು ಮುಖ್ಯ. ಈ ಎಲ್ಲಾ ಬೆಳವಣಿಗೆಗಳು, ವಿವಾದಗಳಿಗೆ ಆದಷ್ಟು ಶೀಘ್ರವಾಗಿ ಅಂತ್ಯ ಸಿಕ್ಕರೆ ಚೆನ್ನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ