5000 ವರ್ಷಗಳ ಹಿರೇಬೆಣಕಲ್ ಮೊರೇರ ಬೆಟ್ಟ ವಿಶ್ವಪಾರಂಪರಿಕ ಪಟ್ಟಿಗೆ ಶೀಘ್ರ

Published : Jun 18, 2025, 05:07 AM IST
Hirebenakal Rocks

ಸಾರಾಂಶ

ಈಗಾಗಲೇ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಿರೇಬೆಣಕಲ್ ಬೆಟ್ಟ, ಶೀಘ್ರದಲ್ಲಿಯೇ ಅಂತಿಮ ಪಟ್ಟಿಯಲ್ಲಿಯೂ ಸೇರಲಿದೆ.

ಗಂಗಾವತಿ: ಸುಮಾರು 5000 ವರ್ಷಗಳ ಇತಿಹಾಸವನ್ನು ಹಿಡಿದಿಟ್ಟುಕೊಂಡಿರುವ ಹಿರೇಬೆಣಕಲ್ ಮೊರೇರ ತಟ್ಟೆಗಳು (ಶಿಲಾ ಸಮಾಧಿಗಳು) ಶೀಘ್ರದಲ್ಲಿಯೇ ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. 

ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿರುವ ಹಿರೇಬೆಣಕಲ್ ಮೊರೇರ ತಟ್ಟೆಗಳು ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ಸ್ಥಳೀಯರು ಮತ್ತು ಇತಿಹಾಸಕಾರರಿಂದ ಅಭಿಪ್ರಾಯ ಸಂಗ್ರಹಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಹಿರೇಬೆಣಕಲ್ ವಿಶ್ವದಲ್ಲಿಯೇ ಶ್ರೇಷ್ಠ ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಇದನ್ನು ಕೇವಲ ನಾಡಿಗೆ, ದೇಶಕ್ಕೆ ಅಲ್ಲದೆ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ. ಈಗಾಗಲೇ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಿರೇಬೆಣಕಲ್ ಬೆಟ್ಟ, ಶೀಘ್ರದಲ್ಲಿಯೇ ಅಂತಿಮ ಪಟ್ಟಿಯಲ್ಲಿಯೂ ಸೇರಲಿದೆ. ಈ ಕುರಿತಂತೆ ಪ್ರವಾಸೋದ್ಯಮ ಇಲಾಖೆ ಅಗತ್ಯ ಕೆಲಸ ಮಾಡುತ್ತಿದೆ ಎಂದ ಅವರು, ಜಾಗತಿಕ ಮಟ್ಟದಲ್ಲಿ ಇದನ್ನು ಸಂರಕ್ಷಣೆ ಮಾಡುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಸ್ಮಾರಕಗಳ ರಕ್ಷಣೆ, ಸ್ಮಾರಕಗಳ ಇತಿಹಾಸ, ಸಾರ್ವಜನಿಕರಿಗೆ ಮತ್ತು ಮುಂದಿನ ಪೀಳಿಗಿಗೆ ಇತಿಹಾಸ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಆದಿಮಾನವರ ಕುರುಹುಗಳು ಮೇಘಾಲಯ ಮತ್ತು ಹಿರೇಬೆಣಕಲ್‌ನಲ್ಲಿ ಮಾತ್ರ ಇವೆ ಎನ್ನುವುದು ಹೆಮ್ಮೆ ಎಂದ ಅವರು, 5000 ವರ್ಷಗಳ ಹಿಂದಿನ ಆದಿ ಮಾನವರ ಜೀವನ ಶೈಲಿ, ಗುಹಾ ಚಿತ್ರಗಳು ಇಲ್ಲಿವೆ ಎಂದು ಸಚಿವರು ಹೇಳಿದರು.

ಮೊರೇರ ಸಮಾಧಿಗಳು ಮತ್ತು ಚಿತ್ರಕಲೆಗಳು ಸೇರಿದಂತೆ ಆದಿ ಮಾನವರ ಕುರುಹುಗಳ ಜಾಗಕ್ಕೆ ಹೋಗುವ ಮಾರ್ಗ ಸೇರಿದಂತೆ ಸೌಲಭ್ಯಗಳ ಕುರಿತು ತಿಂಗಳೊಳಗಾಗಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದ ಸಚಿವರು, ಬರುವ ಪ್ರವಾಸಿಗರಿಗೆ ರಸ್ತೆ, ಕುಡಿಯುವ ನೀರಿಗಾಗಿ ಭೂಸ್ವಾಧೀನ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

ಕೊಪ್ಪಳದಲ್ಲಿ ಪ್ರಾಚ್ಯವಸ್ತು ಇಲಾಖೆಯ ಕಚೇರಿಯನ್ನು15 ದಿನದೊಳಗಾಗಿ ಪ್ರಾರಂಭಸಲಾಗುತ್ತಿದ್ದು, ಅಧಿಕಾರಿಗಳನ್ನು ನೇಮಿಸುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದರು.

ಬೆಂಗಳೂರು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಹಿರೇಬೆಣಕಲ್‌ನ ಮೊರೇರ ಶಿಲಾ ಸಮಾಧಿಗಳು ಸೇರಿದಂತೆ ರೇಖಾ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು.

ಕುರುಹುಗಳು, ಶಿಲಾಚಿತ್ರಗಳು ಲಭ್ಯವಾದರೆ ಕೂಡಲೆ ಇಲಾಖೆಗೆ ಮಾಹಿತಿ ನೀಡಬೇಕೆಂದು ಹೇಳಿದರು.ಈ ವೇಳೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಜಿಲ್ಲಾಧಿಕಾರಿ ನಲಿನ್ ಆತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ಪ್ರಾಚ್ಯವಸ್ತು ಇಲಾಖೆ ಆಯುಕ್ತ ದೇವರಾಜ್, ಉದ್ಯಮಿ ಕೆ. ಕಾಳಪ್ಪ, ಸರ್ವೇಶ್ ಮಾಂತಗೊಂಡ, ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್, ಕೆ.ಎಂ. ಸೈಯದ್, ಹನುಮರೆಡ್ಡಿ ಹಂಗನಕಟ್ಟಿ ಸೇರಿದಂತೆ ಅಧಿಕಾರಿಗಳು ಇದ್ದರು.

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್ ಕಾರ್ಯ ಶ್ಲಾಘನೀಯ

ಹಿರೇಬೆಣಕಲ್ ಮೊರೇರ ತಟ್ಟೆಗಳು ಅಥವಾ ಶಿಲಾ ಸಮಾಧಿಗಳನ್ನು ಬೆಳಕಿಗೆ ತಂದಿರುವ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್ ಕಾರ್ಯ ಶ್ಲಾಘನೀಯ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಇಂಥ ಮಹತ್ವದ ಇತಿಹಾಸ ಹೊಂದಿರುವ ಈ ಪ್ರದೇಶವನ್ನು ಬೆಳಕಿಗೆ ತಂದಿದ್ದು ಅಭಿವೃದ್ಧಿಪಡಿಸುವ ಮೂಲಕ ನಾಡಿಗೆ ಪರಿಚಯಿಸಲಾಗುವುದು ಮತ್ತು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌