Hijab Row: ಹಿಜಾಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಸಿ.ಟಿ ರವಿ

By Kannadaprabha News  |  First Published Feb 11, 2022, 1:00 PM IST

ಉಡುಪಿ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರ ಈಗ ಇಡೀ ದೇಶ, ವಿಶ್ವವ್ಯಾಪಿ ಚರ್ಚಾ ವಿಷಯವಾಗಿದೆ. ಇದಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿರುವ ಕಾಂಗ್ರೆಸ್ ನಾಯಕರು ಈಗ ಹಿಜಾಬ್ ಹಿಂದೆ ಬಿದ್ದು ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ.


ಬುರ್ಖಾ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು, ನೀಲಿ ಬಣ್ಣದ ಶಾಲು ಧರಿಸಿ ಬರುವ ವಿದ್ಯಮಾನ ಸಮಾಜವನ್ನು ಧ್ರುವೀಕರಿಸುವ ಅನಪೇಕ್ಷಣೀಯ ಬೆಳವಣಿಗೆ. ಈ ತಿಕ್ಕಾಟದ ಮಧ್ಯೆ ‘ತೊಟ್ಟಿಲು ತೂಗುತ್ತಲೇ ಮಗುವನ್ನು ಚಿವುಟುವ ಮನಸ್ಥಿತಿಯ’ ಕಾಂಗ್ರೆಸ್ ನಾಯಕರು ವಸ್ತ್ರ ಸಂಹಿತೆಯನ್ನು ಮತಗಳ ಅಸ್ತ್ರ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ.

ಉಡುಪಿ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರ ಈಗ ಇಡೀ ದೇಶ, ವಿಶ್ವವ್ಯಾಪಿ ಚರ್ಚಾ ವಿಷಯವಾಗಿದೆ. ಇದಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿರುವ ಕಾಂಗ್ರೆಸ್ ನಾಯಕರು ಈಗ ಹಿಜಾಬ್ ಹಿಂದೆ ಬಿದ್ದು ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ. ‘ಸಾಲು ಮನೆಗಳಿಗೆ ಬೆಂಕಿ ಬಿದ್ದರೆ ಸಂಪನ್ನನ ಮನೆ ಉಳಿದೀತೇ?’ ಸ್ಕಾರ್ಫ್‌ನ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಹೊತ್ತಿಸಿದ ಕಿಡಿ, ಈಗ ಇಡೀ ದೇಶದಲ್ಲೇ ಕಾಡ್ಗಿಚ್ಚಾಗಿ ಪರಿಣಮಿಸಿದೆ. ವಸ್ತ್ರಸಂಹಿತೆ ವಿಷಯ ಚುನಾವಣೆಯ ಅಸ್ತ್ರವಾಗಿದೆ.

Tap to resize

Latest Videos

1991 ರ ನಂತರ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಡಾ.ಮನಮೋಹನ್ ಸಿಂಗ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದರು. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ಸಾರಥಿ ಆದ ನಂತರ ಎರಡಂಕಿ ದಾಟಲು ಸಾಧ್ಯವಾಗದೇ ಅಧಿಕೃತ ವಿಪಕ್ಷ ನಾಯಕನ ಸ್ಥಾನವೂ ದೊರೆತಿಲ್ಲ. ಕೆಟ್ಟರೂ ಬುದ್ಧಿ ಕಲಿಯದ ಕಾಂಗ್ರೆಸ್ ನಾಯಕರು ಮತ್ತೆ ಜಾತಿ-ಧರ್ಮಗಳನ್ನು ಎತ್ತಿಕಟ್ಟಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇಷ್ಟಕ್ಕೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುರ್ಖಾ ಬಗ್ಗೆ ಹೇಳಿರುವ ಮಾತುಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಅಗತ್ಯವಿದೆ. ಇಷ್ಟಕ್ಕೂ ಶಾಲೆಯಲ್ಲಿ ಸಮವಸ್ತ್ರ ಏಕಾಗಿ ಮಾಡಿದ್ದಾರೆ ಎಂಬ ಪರಿಜ್ಞಾನವೂ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಯಾವುದೇ ಜಾತಿ ಮತ ಸಂಪ್ರದಾಯಗಳ ಭೇದವಿಲ್ಲದೆ ಮಕ್ಕಳು ಸಮಾನ ಮನಸ್ಥಿತಿಯಲ್ಲಿ ಕಲಿಯಬೇಕಾದ ವಾತಾವರಣ ನಿರ್ಮಿಸಲು ಅಲ್ಲವೇ? ಆದರೆ ಈಗ ಜಾತಿ-ಮತ ಸಂಪ್ರದಾಯಕ್ಕೆ
ಒಂದೊಂದು ಡ್ರೆಸ್‌ಕೋಡ್ ಅಳವಡಿಸಿದರೆ ಮಕ್ಕಳ ಮನಸ್ಸಿನಲ್ಲಿ ಜಾತಿಯತೆಯ ಭಾವವನ್ನು, ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ.

Hijab Controversy ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಜಾಬ್ ಬ್ಯಾನ್!

‘ವೈರಿಗಿಂತಲೂ ಹತೋಟಿಯಿಲ್ಲದ ಮನಸ್ಸೇ ಹೆಚ್ಚು ಕೆಡುಕನ್ನುಂಟು ಮಾಡುತ್ತದೆ’ ಎಂದು ಸಾರಿದ ಗೌತಮ ಬುದ್ಧನ ಮಾತುಗಳು ಅಕ್ಷರಶಃ ಸತ್ಯವಾದುದು. ಅಧಿಕಾರ ಕಳೆದುಕೊಂಡು ಲಯ ತಪ್ಪಿದ ಕಾಂಗ್ರೆಸ್ ನಾಯಕರಿಗೆ ಈಗ ಹಿಜಾಬ್ ಒಂದು ಅಸ್ತ್ರವಾಗಿದೆ. ಜಾತಿ, ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಅವರಿಗೆ ಈ ದೇಶದ ಅಭ್ಯುದಯಕ್ಕಿಂತ ಕುಮ್ಮಕ್ಕು ನೀಡುವ ಮೂಲಕ ತಮ್ಮ ರಾಜಕೀಯದ ಮೇಲಾಟವೇ ಮುಖ್ಯವಾಗಿದೆ.

ಭಾರತೀಯ ಮಿಲಿಟರಿಯ ಆರೋಗ್ಯ ಸೇವೆಯಲ್ಲಿ ಸೇವೆ ಸಲ್ಲಿಸುವ ಮುಸ್ಲಿಂ ನರ್ಸ್‌ಗಳು ಹಿಜಾಬ್ ಧರಿಸಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವೃತ್ತಿಯಲ್ಲಿ ಹಿಜಾಬ್ ಧರಿಸುವುದು ನಿಮ್ಮ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಸ್ತ್ರಸಂಹಿತೆ ರದ್ದತಿಗೆ ಸಂಬಂಧಿಸಿದಂತೆ ಅನೇಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಬಾಂಬೆ ಹೈಕೋರ್ಟ್‌ನ ಮುಂದೆ 2001 ರಲ್ಲಿ ಫಾತಿಮಾ ಹುಸೇನ್ ಸಯ್ಯದ್ ಮತ್ತು ಭಾರತ್ ಎಜುಕೇಶನ್ ಸೊಸೈಟಿ ನಡುವೆ ಹಿಜಾಬ್ ಧಾರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಸ್ತ್ರಸಂಹಿತೆಯಿಂದ ಸಂವಿಧಾನದ 25 ನೇ ವಿಧಿಯ ಉಲ್ಲಂಘನೆಯಾಗದು ಎಂದು ಕೋರ್ಟ್ ಹೇಳಿತ್ತು. ಹಾಗೆಯೇ 2009 ರಲ್ಲಿ ಮದ್ರಾಸ್ ಹೈಕೋರ್ಟ್ ಸಹ ವಿ.ಕಮಲಂ ವರ್ಸಸ್ ತಮಿಳುನಾಡು ಡಾ.ಎಂಜಿಆರ್ ಮೆಡಿಕಲ್ ಯೂನಿವರ್ಸಿಟಿ ಪ್ರಕರಣದಲ್ಲೂ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿತ್ತು. ಸೀರೆ ಧರಿಸಿ ಬರುವಂತೆ ಕಾಲೇಜು ಮಾಡಿದ ನಿಯಮಕ್ಕೆ ವಿರುದ್ಧವಾಗಿ ಚೂಡಿದಾರ್ ಧರಿಸುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದರು. ಆದರೆ ಯೂನಿವರ್ಸಿಟಿಯ ವಸ್ತ್ರ ಸಂಹಿತೆಯನ್ನು ಕೋರ್ಟ್ ಎತ್ತಿ ಹಿಡಿದಿತ್ತು.

ಕೇರಳ ಹೈಕೋರ್ಟ್ ಕೂಡ, ಫಾತಿಮಾ ನಸ್ನಿನ್ ಮತ್ತು ಇತರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಯೊಳಗೆ ಬರುತ್ತೇವೆ ಎಂದಾಗ ಶಾಲಾಡಳಿತದ ಪರವಾಗಿ ತೀರ್ಪಿತ್ತಿತ್ತು. ಅದೇ ರೀತಿ, ಕರ್ನಾಟಕ ಶಿಕ್ಷಣ ಕಾಯ್ದೆ-೧೯೮೩ರ ಅಡಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ನಿಗದಿಪಡಿಸುವ ಅಧಿಕಾರ ಸರ್ಕಾರ ಹಾಗೂ ಶಾಲೆಯ ಆಡಳಿತ ಮಂಡಳಿಗೆ ಇದೆ. ಪ್ರಸ್ತುತ ಹಿಜಾಬ್ ಕುರಿತು ರಾಜ್ಯ ಹೈಕೋರ್ಟ್‌ನಲ್ಲಿ ವಾದ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಸಮಸ್ಯೆ ಅಂತಾರಾಷ್ಟ್ರೀಯ ಷಡ್ಯಂತ್ರ ಎನ್ನುವುದಕ್ಕೆ ‘ದಿ ಟೆಲಿಗ್ರಾಫ್’ ಪತ್ರಿಕೆಯ ಮುಖಪುಟದಲ್ಲಿ ಮಂಡ್ಯದ ಘಟನೆಯನ್ನು ಪ್ರಕಟಿಸಿದ್ದೇ ಸಾಕ್ಷಿ.

ಸಂಪ್ರದಾಯ ಪಾಲಿಸುವ ದೇಶಗಳಲ್ಲೇ ‘ಹಿಜಾಬ್’ ನಿಷೇಧ?
ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮಾತ್ರ ಮುಸ್ಲಿಂ ಮಹಿಳೆಯರು ಹಿಜಾಬ್, ಬುರ್ಖಾ ಧರಿಸುವುದು ಕಡ್ಡಾಯ. 1980 ರಲ್ಲಿ ಟರ್ಕಿ, 1981 ರಲ್ಲಿ ಟ್ಯುನೀಶಿಯ, 2009ರಲ್ಲಿ ಕೊಸಾಬೋ, 2010 ರಲ್ಲಿ ಅಜರ್ಬೈಜಾನ್, 2010ರಲ್ಲಿ ಸಿರಿಯಾ, 2012 ರಲ್ಲಿ ತಜಕಿಸ್ತಾನ್ ದೇಶಗಳು ಹಿಜಾಬ್, ಬುರ್ಖಾಗಳನ್ನು ನಿಷೇಧಿಸಿವೆ. 2011 ರಲ್ಲಿ ಬೆಲ್ಜಿಯಂ, 2017 ರಲ್ಲಿ ಜರ್ಮನಿ ಬುರ್ಖಾ ನಿಷೇಧಿಸಿದೆ. ಡೆನ್ಮಾರ್ಕ್ ಮತ್ತು ಚೀನಾ ಎಲ್ಲ ಬಗೆಯ ಮುಸುಕು ಹಾಗೂ ಹಿಜಾಬ್‌ಗಳನ್ನು ನಿಷೇಧಿಸಿವೆ.

ನಮ್ಮ ರಾಜ್ಯದಲ್ಲಿ ಜಾತಿ ಜಾತಿಗಳ ಮಧ್ಯೆ ತಂದಿಕ್ಕಿ ತಮಾಷೆ ನೋಡುವ ಕಾಂಗ್ರೆಸ್‌ನ ಆಷಾಢಭೂತಿ ಜಾತ್ಯತೀತ ನಾಯಕರ ಮುಖವಾಡ ಈಗ ಕಳಚುತ್ತಿದೆ. ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹೋರಾಟಕ್ಕೆ ಸಂಬಂಧಿಸಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಕಾಲೇಜಿನ ೨೦೦೯-೧೦ನೇ ಸಾಲಿನ ವಾರ್ಷಿಕ ಸಂಚಿಕೆಯಲ್ಲಿ ಮಹತ್ವದ ಸಾಕ್ಷ್ಯಗಳಿವೆ. ಕಾಲೇಜಿನಲ್ಲಿ ಈ ಹಿಂದೆಯೂ ಹಿಜಾಬ್ ತೊಡಲು ಅವಕಾಶ ಇರಲಿಲ್ಲ. ವಿದ್ಯಾರ್ಥಿನಿ
ಯರು ಸಮಾನ ವಸ್ತ್ರಸಂಹಿತೆಯಲ್ಲಿದ್ದರು. ಅದರ ಫೋಟೋಗಳು ಲಭ್ಯವಾಗಿವೆ. ಅದರಲ್ಲಿ ಯಾರೂ ಕೂಡ ಹಿಜಾಬ್ ಧರಿಸಿಲ್ಲ.

Hijab Controversy ಸಮವಸ್ತ್ರ ಶಾಲೆಯ ಮೂಲಭೂತ ಹಕ್ಕು, ಹಿಜಾಬ್‌ಗೆ ಧರಿಸುವ ಮನವಿ ವಜಾ, 2018 ರ ಕೇರಳ ತೀರ್ಪು

ನಮ್ಮ ದೇಶದ ರಾಜಕೀಯ ಇತಿಹಾಸವನ್ನು ನಿರ್ದಿಷ್ಟ ಕಾಲಘಟ್ಟಗಳಾಗಿ ವಿಭಜಿಸಿದರೆ ಅನೇಕ ಆಸಕ್ತಿದಾಯಕ ಸಂಗತಿಗಳು ಬೆಳಕಿಗೆ ಬರುತ್ತವೆ. ೧೯೬೯ರಲ್ಲಿ ಕಾಂಗ್ರೆಸ್ ವಿಭಜನೆ ನಂತರ ಇಂದಿರಾ ಗಾಂಧಿ ಅವರ ಯುಗ ಆರಂಭಗೊಳ್ಳುತ್ತದೆ. ರಾಜೀವ್ ಗಾಂಧಿ ೧೯೮೯ರಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದರೊಂದಿಗೆ ಇಂದಿರಾ ಯುಗ ಕೊನೆಗೊಳ್ಳುತ್ತದೆ. ಕಾಂಗ್ರೆಸ್ ಪಕ್ಷದ ಮರು ಹುಟ್ಟು ಎಂಬುದು ಕನಸಿನ ಮಾತು. ಸೋರುತ್ತಿರುವ ದೋಣಿಯಲ್ಲಿ ಪಯಣ ಆರಂಭಿಸಿರುವ

ಕಾಂಗ್ರೆಸ್ ನಾಯಕರಿಗೆ ಅಂಬಿಗನೇ ಮಾಯವಾಗಿದ್ದಾನೆ. ಕಾಂಗ್ರೆಸ್ ಪಕ್ಷ ತನ್ನ ಮತೀಯ ವೋಟ್‌ಬ್ಯಾಂಕ್ ಉಳಿಸಿಕೊಳ್ಳಲು ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷ ಬೀಜ ಬಿತ್ತುವ ಷಡ್ಯಂತ್ರ ನಡೆಸುತ್ತಿದೆ. ಯಾಕೆಂದರೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ, ಬಿಹಾರದಲ್ಲಿ ಆರ್‌ಜೆಪಿ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿ ಪಕ್ಷದ ಪಾಲಾಗಿರುವ ಮುಸ್ಲಿಮರ ಮತಗಳನ್ನು ತನ್ನ ಪರವಾಗಿ ಕ್ರೋಢೀಕರಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾವಾಗಿದೆ.

ಅದರ ಒಂದು ಭಾಗವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆಸಲು ಹಿಜಾಬ್ ಕಿಚ್ಚು ಹಚ್ಚಿದ ಕಾಂಗ್ರೆಸ್, ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಬೆಂಕಿ ಹಚ್ಚಿ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಅದರ ರಾಜಕೀಯ ಅಧಃಪತನಕ್ಕೆ ಸಾಕ್ಷಿಯಾಗಿದೆ.

ಕಾಂಗ್ರೆಸ್ ಪಕ್ಷ ಎಂಬ ಶವಪೆಟ್ಟಿಗೆಗೆ ಕೊನೆಯ ಮೊಳೆ
ಒಡೆದು ಆಳುವ, ಧರ್ಮ ಆಧಾರಿತ ರಾಜಕಾರಣ ಮಾಡುತ್ತಾ ಹೋದರೆ ಜನರು ಕಾಂಗ್ರೆಸ್ ಎಂಬ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಕಾಲ ದೂರವಿಲ್ಲ. ಧಾರ್ಮಿಕ ತಿಕ್ಕಾಟಕ್ಕೆ ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ರಾಜಕಾರಣ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಕಾಂಗ್ರೆಸ್ ಪಕ್ಷದ ನಾಯಕರು ಸ್ಕಾರ್ಫ್ ಧಾರಣೆಯನ್ನು ಚರ್ಚಾ ವಿಷಯನ್ನಾಗಿಸಿ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಪ್ರಚಾರದ ವಿಷಯ ವಸ್ತುವನ್ನಾಗಿಸಿಕೊಂಡಿರುವುದು ನಾಚಿಕೆಗೇಡು.
ಡಿ.ಕೆ.ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಸುಳ್ಳಿನ ಸರಮಾಲೆಯನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ‘ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಭಗವಾಧ್ವಜ ಹಾರಿಸಲಾಗಿದೆ’ ಎಂದು ಹೇಳಿರುವುದು ಬೌದ್ಧಿಕ ದಿವಾಳಿತನ. ಕಳೆದ ವರ್ಷ ದೆಹಲಿಯ ಕೆಂಪುಕೋಟೆಯ ಮೇಲಿದ್ದ ತ್ರಿವರ್ಣ ಧ್ವಜವನ್ನು ಇಳಿಸಿ ಖಲಿಸ್ಥಾನ ಧ್ವಜ ಹಾರಿಸಿದಾಗ ಎಲ್ಲಿ ಹೋಗಿತ್ತು ನಿಮ್ಮ ಪರಾಕ್ರಮ?  ತ್ರಿವರ್ಣ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಬಳಿ ಏನಾದರೂ ಸಾಕ್ಷಿಯಿದೆಯೇ?

ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಕ್ಕೆ ಅವರು ದೇಶದ ಮುಂದೆ ಕ್ಷಮೆಯಾಚಿಸಬೇಕು. ಶಾಲಾ ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಸರಿಯಾಗಿ ಹೋಗಿದ್ದರೆ ಶಿಕ್ಷಣ ಸಂಸ್ಥೆಗಳಲ್ಲಿ ಯಾವಾಗ ರಾಷ್ಟ್ರ ಧ್ವಜ ಹಾರಿಸುತ್ತಾರೆ ಎಂದು ಅವರಿಗೆ ಗೊತ್ತಾಗುತ್ತಿತ್ತು. ಇನ್ನು ರಾಜ್ಯದಲ್ಲಿ ಏನೇ ವಿವಾದಗಳು ಸೃಷ್ಟಿಯಾದರೂ ಅದನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ತಲೆಗೆ ಕಟ್ಟುವುದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹಳೆಯ ಅಭ್ಯಾಸ. ಸಮಾಜದ ಸಾಮರಸ್ಯ ಕೆಡಿಸುವ ಮತಾಂಧ ನಾಯಕರು ಏನೇ ಹೇಳಿಕೆ ಕೊಟ್ಟರೂ ಅವರ ಬಗ್ಗೆ ಮಾತನಾಡದೇ ಅವರನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವ ಕಾಂಗ್ರಸ್ ನಾಯಕರ ವರ್ತನೆ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ. ಎಲ್ಲರಿಗೂ ಸಮವಸ್ತ್ರ ತೊಡಿಸುವ ಮೂಲಕ, ನಿರ್ದಿಷ್ಟ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮಾತ್ರ ಈ ರೀತಿಯ ಗೊಂದಲಗಳನ್ನು ನಿಯಂತ್ರಿಸಬಹುದಾಗಿದೆ. 

- ಸಿ ಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

click me!