Karnataka Hijab Row ಹಿಜಾಬ್‌ ಹೆಸರಲ್ಲಿ ಕುತಂತ್ರ, 6 ವಿದ್ಯಾರ್ಥಿನಿಯರಿಗೆ ಮಾತ್ರ ಸಮಸ್ಯೆ ಯಾಕಾಯ್ತು? ಸಚಿವ ಕೋಟ!

By Kannadaprabha NewsFirst Published Feb 6, 2022, 4:31 AM IST
Highlights
  • ಹಿಜಾಬ್‌ ಹೆಸರಲ್ಲಿ ಕುತಂತ್ರ ನಡೆಯುತ್ತಿದೆ ಎಂದ ಸಚಿವ
  • 75 ರಿಂದ 100 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಗಿಲ್ಲ ಸಮಸ್ಯೆ
  • 6 ವಿದ್ಯಾರ್ಥಿನಿಯರಿಗೆ ದಿಢೀರ್ ಹಿಜಾಬ್ ಸಮಸ್ಯೆಯಾಗಿದ್ದುಹೇಗೆ?
     

ಬೆಂಗಳೂರು(ಫೆ.06):  ಹಿಜಾಬ್‌(Hijab) ಹೆಸರಿನಲ್ಲಿ ಮತಾಂಧರು ಸಮಾಜ ವಿಭಜಿಸುವ ಕುತಂತ್ರ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೆಟ್ಟಹೆಸರು ತರಲು ಷಡ್ಯಂತ್ರ ಮಾಡುತ್ತಿದ್ದು, ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ(kota srinivas poojary) ಒತ್ತಾಯಿಸಿದರು.

ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾಭಿವೃದ್ಧಿ ಸಮಿತಿ, ಸರ್ಕಾರದ ನಿಯಮಗಳಂತೆ ಈಗಾಗಲೇ ವಸ್ತ್ರಸಂಹಿತೆ(Uniforms) ಜಾರಿಯಲ್ಲಿದೆ. ಇದನ್ನು ಪಾಲಿಸಬೇಕು. ನೆಮ್ಮದಿಯ ವಾತಾವರಣ ಹಾಳು ಮಾಡಲು ಮತಾಂಧರು ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬೇರೆ ರಾಷ್ಟ್ರಗಳಲ್ಲೂ ಹಿಜಾಬ್‌ ಬಗ್ಗೆ ಚರ್ಚೆ ನಡೆಯಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Hijab Controversy ಹಿಜಾಬ್ ಹಾಕದೇ ಬರಲಾಗುವುದಿಲ್ಲ ಅಂದ್ರೆ ಕಾಲೇಜಿಗೆ ಬರಬೇಡಿ ಎಂದ ಬಿಜೆಪಿ ಶಾಸಕ

ನಿಯಮಗಳಂತೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಆಗಮಿಸಬೇಕು. ಒಂದೂವರೆ ವರ್ಷದಿಂದ ಇಲ್ಲದ ಸಮಸ್ಯೆ ಈಗ ಉಂಟಾಗಿರುವುದಕ್ಕೆ ಮತಾಂಧರ ಕುಮ್ಮಕ್ಕೇ ಕಾರಣ. ಅಲ್ಲಿ 75 ರಿಂದ 100 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದು 6 ವಿದ್ಯಾರ್ಥಿನಿಯರಿಗೆ ಮಾತ್ರ ಏಕೆ ಸಮಸ್ಯೆಯಾಯಿತು. ನಮ್ಮಲ್ಲಿ ಸ್ಪಷ್ಟತೆಯಿದ್ದು ಯಾವುದೇ ಗೊಂದಲವಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಹೆಸರಿನಲ್ಲಿ ಧರ್ಮಾಂಧತೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳು ಹಿಜಾಬ್‌, ಶಾಲು ಎರಡೂ ಹಾಕುವುದೂ ತಪ್ಪೇ: ಅಶೋಕ್‌
ಕಾಂಗ್ರೆಸ್‌ ಪ್ರೇರಣೆಯಿಂದ ಈ ‘ಹಿಜಾಬ್‌’ ಘಟನೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಸಮವಸ್ತ್ರದ ಬದಲಿಗೆ ಹಿಜಾಬ್‌ ಧರಿಸುವುದು ಹಾಗೂ ಕೇಸರಿ ಶಾಲು ಹಾಕುವುದೂ ತಪ್ಪು. ಶಾಲೆಗೆ ಬರುವವರು ಧರ್ಮ ಪ್ರಚಾರಕ್ಕೆ ಬರಬಾರದು. ರಾಜ್ಯದಲ್ಲಿ ಆಷ್ಘಾನಿಸ್ತಾನ್‌ ಸಂಸ್ಕೃತಿ ನಡೆಯುವುದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

News Hour ಹಿಜಾಬ್-ಕೇಸರಿ ಶಾಲು ಜಟಾಪಟಿಗೆ ಸರ್ಕಾರ ಬ್ರೇಕ್, ಫೆ.5ರ ಪ್ರಮುಖ ಸುದ್ದಿಯ ರೌಂಡಪ್

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರೇರಣೆಯಿಂದಲೇ ಹಿಜಾಬ್‌ ವಿವಾದ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೂ ಅಲ್ಪಸಂಖ್ಯಾತರಿಗೂ ಬಹಳ ನಂಟು. ಅವರು ಟಿಪ್ಪು ಸುಲ್ತಾನ್‌ ಜಯಂತಿಯನ್ನು ಮುಸ್ಲಿಮರು ಕೇಳದಿದ್ದರೂ ಆಚರಿಸಿದ್ದರು. ಶಾದಿ ಭಾಗ್ಯ ನೀಡಿದ್ದರು. ಹಿಂದೂಗಳಲ್ಲಿ, ಹಿಂದುಳಿದವರಲ್ಲಿ ಯಾರೂ ಬಡವರಿಲ್ವಾ, ಅವರಿಗಾಗಿ ಕಾಂಗ್ರೆಸ್‌ ಯೋಚನೆಯನ್ನೇ ಮಾಡಿಲ್ಲ ಎಂದು ಕಿಡಿ ಕಾರಿದರು.

ಎಲ್ಲರೂ ಸಮವಸ್ತ್ರ ಧರಿಸಬೇಕು. ಸರ್ಕಾರಿ ಶಾಲೆಯ ಕಾನೂನಿನಲ್ಲಿ ಏನಿದೆ ಅದನ್ನು ಪಾಲನೆ ಮಾಡಬೇಕು. ಕೇರಳದಲ್ಲಿ ಇಂತಹ ಘಟನೆ ನಡೆದಾಗ ಅಲ್ಲಿಯ ಹೈಕೋರ್ಟ್‌ ಸಹ ಇದು ತಪ್ಪು ಎಂದು ಹೇಳಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇದು ಪಾಕಿಸ್ತಾನ, ಆಷ್ಘಾನಿಸ್ತಾನ ಅಲ್ಲ, ಹಿಂದುಸ್ತಾನ್‌. ಮನಸ್ಸಿಗೆ ಬಂದಂತೆ ಮಾಡಲು ಸಾಧ್ಯವಿಲ್ಲ. ಇವರೆಲ್ಲ ಸೇರಿ ನಮ್ಮ ದೇಶವನ್ನು ಪಾಕಿಸ್ತಾನವೋ, ಆಷ್ಘಾನಿಸ್ತಾನವೋ ಮಾಡಲು ಹೊರಟಿದ್ದಾರೆ ಎಂದರು.

ಬುದ್ದಿ ಕಲಿಸಲು ಕೇಸರಿ ಶಾಲು:
ಶಾಲಾ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ತರಗತಿಗಳಿಗೆ ಬರುವುದೂ ಸಹ ತಪ್ಪು. ಹಿಂದೆ ಯಾರೂ ಕೂಡ ಕೇಸರಿ ಶಾಲು ಹಾಕಿ ಬರುತ್ತಿರಲಿಲ್ಲ. ಅವರಿಗೆ ಬುದ್ದಿ ಕಲಿಸಲು ಹಾಕಿದ್ದಾರೆ ಅಷ್ಟೇ. ಎರಡೂ ಸರಿಯಲ್ಲ, ಎರಡೂ ತಪ್ಪೇ. ಸಂವಿಧಾನದ ಆಶಯ ಹಾಗೂ ಸರ್ಕಾರಿ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು ಎಂದು ಹೇಳಿದರು.

ಸಿದ್ದು ಸಂವಿಧಾನ ಪೀಠಿಕೆ ಸರಿಯಾಗಿ ಓದಲಿ: ಸುಧಾಕರ್‌
ಹಿಜಾಬ್‌ ಧರಿಸುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ಕಾನೂನು ಬಲ್ಲವರು, ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರು. ಸಂವಿಧಾನದ ಪೀಠಿಕೆಯನ್ನು ಚೆನ್ನಾಗಿ ಓದಲಿ ಎಂದಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಹಿಜಾಬ…-ಕೇಸರಿಶಾಲು ವಿವಾದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುತ್ತಿದ್ದೇನೆ. ಒಂದೆರಡು ದಿನದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

click me!