ಕರ್ನಾಟಕದಲ್ಲಿ ಭಾರೀ ಮಳೆಗೆ ಹೆದ್ದಾರಿಗಳಿಗೆ ಜಲ ಕಂಟಕ..!

By Kannadaprabha NewsFirst Published Aug 4, 2022, 5:31 AM IST
Highlights

ಬೆಂಗಳೂರು-ಮೈಸೂರು ಹೆದ್ದಾರಿಗೆ ಕೆರೆ ನೀರಿಂದ ಪ್ರವಾಹ, ಸಂಚಾರ ಬಂದ್‌

ಬೆಂಗಳೂರು(ಆ.04):  ರಾಜ್ಯದಲ್ಲಿ ಮತ್ತೆ ಪ್ರಾರಂಭವಾಗಿರುವ ಬಿರುಮಳೆಯಿಂದಾಗಿ ಬುಧವಾರ 3 ಕಡೆಗಳಲ್ಲಿ ಹೆದ್ದಾರಿ ಸಂಚಾರಕ್ಕೆ ಕಂಟಕವುಂಟಾಗಿದೆ. ಕೆರೆ ಕೋಡಿ ಹರಿದು ಉಂಟಾದ ನೀರಿನ ಪ್ರವಾಹ ರಸ್ತೆಗೆ ನುಗ್ಗಿದ್ದರಿಂದ ಬೆಂಗಳೂರು-ಮೈಸೂರು, ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಗಳಲ್ಲಿ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಜೊತೆಗೆ ಕೊಡಗು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ಕರಾವಳಿಯನ್ನು ಬಯಲುಸೀಮೆಯೊಂದಿಗೆ ಬೆಸೆಯುವ ಮತ್ತೊಂದು ಪ್ರಮುಖ ಘಾಟ್‌ ರಸ್ತೆ ಸಂಪರ್ಕವೂ ಕಡಿತವಾಗುವ ಆತಂಕ ಎದುರಾಗಿದೆ.

ಮಂಡ್ಯ ಜಿಲ್ಲೆಯ ಐತಿಹಾಸಿಕ ಮದ್ದೂರು ಕೆರೆ ಕೋಡಿ ಒಡೆದು ಉಂಟಾದ ನೀರಿನ ಪ್ರವಾಹ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದರಿಂದ ಬುಧವಾರ ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಮಂಗಳವಾರವಷ್ಟೇ ಮಂಡ್ಯ ತಾಲೂಕು ಹೊಸಬೂದನೂರು ಕೆರೆ ಒಡೆದು ಅಪಾರ ಪ್ರಮಾಣದ ನೀರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರ ಬಂದ್‌ ಆಗಿತ್ತು. ಇಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಇಳಿಮುಖವಾದ ಬೆನ್ನಲ್ಲೇ ಮದ್ದೂರು ಕೆರೆ ಒಡೆದು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹೀಗಾಗಿ ಬೆಂಗಳೂರಿನಿಂದ ಬರುವ ವಾಹನಗಳನ್ನು ರುದ್ರಾಕ್ಷಿಪುರ, ವೈದ್ಯನಾಥಪುರ, ಮದ್ದೂರು, ಕೆ.ಎಂ.ದೊಡ್ಡಿ, ಮಂಡ್ಯ ಮಾರ್ಗವಾಗಿ ಮೈಸೂರಿಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ಬರುವ ವಾಹನಗಳನ್ನು ಶ್ರೀರಂಗಪಟ್ಟಣ, ಮಂಡ್ಯ, ಮಳವಳ್ಳಿ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಕರ್ನಾಟಕದಲ್ಲಿ ವರುಣನ ಆರ್ಭಟ: ನಾಲ್ವರು ಬಲಿ

ಇನ್ನು ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಹಲವು ಕೆರೆಗಳು ಒಡೆದು ಅಪಾರ ಪ್ರಮಾಣದ ನೀರು ಉಕ್ಕಿಹರಿದ ಪರಿಣಾಮ ಕೆ.ಆರ್‌.ಪೇಟೆ-ಕಿಕ್ಕೇರಿ ಮೂಲಕ ಹಾದು ಹೋಗಿರುವ ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿ ಸಂಚಾರವೂ ಸಂಪೂರ್ಣ ಬಂದ್‌ ಆಗಿದೆ. ಅರಸೀಕೆರೆ-ಶಿವಮೊಗ್ಗ-ಸಾಗರದ ಮೂಲಕ ಪಣಜಿ ಮತ್ತು ಮುಂಬೈ ಮಹಾನಗರವನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದೆ.

ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮಾಣಿ-ಮೈಸೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ರಲ್ಲಿ ದೇವರಕೊಲ್ಲಿ ಕೊಯನಾಡು ನಡುವೆ ದೊಡ್ಡ ಪ್ರಮಾಣದಲ್ಲಿ ಬಿರುಕು ಕಂಡುಬಂದಿದೆ. ರಸ್ತೆ ಸಂಪೂರ್ಣ ಕುಸಿದುಹೋಗುವ ಭೀತಿ ಎದುರಾಗಿರುವುದರಿಂದ ಭಾರಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದರೆ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗುವ ಸಾಧ್ಯತೆಯಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೋಣಿಗಲ್‌ ಎಂಬಲ್ಲಿ ಕಳೆದ ತಿಂಗಳು ಭೂಕುಸಿತವಾದ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ನಡೆಸುತ್ತಿದ್ದು ಇಲ್ಲಿ ಸಂಜೆ 6ರಿಂದ ಬೆಳಗ್ಗೆ 6ರ ತನಕ ಇಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಭಾರಿ ವಾಹನಗಳ ಸಂಚಾರಕ್ಕೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಬೆಂಗಳೂರು-ಮಂಗಳೂರು ರಾತ್ರಿ ಸಂಚಾರಕ್ಕೆ ಚಾರ್ಮಾಡಿ ಘಾಟ್‌ ಮಾತ್ರ ಮುಕ್ತವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮೇಘಸ್ಫೋಟ: ಹಳ್ಳದಂತಾದ ರಸ್ತೆಗಳು, ಜನರು ಕಂಗಾಲು.!

14575 ಮನೆಗಳು, 21431 ಹೆಕ್ಟೇರ್‌ ಕೃಷಿ ಹಾನಿ: ಸಿಎಂ

ಭಟ್ಕಳ: ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಬುಧವಾರದವರೆಗೆ 600 ಮನೆಗಳು ಸಂಪೂರ್ಣ ಕುಸಿದಿದ್ದು, 2,312 ಮನೆಗಳು ಹೆಚ್ಚಿನ ಹಾನಿಯಾಗಿದ್ದರೆ, 14,575 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 21431 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ಮಳೆ ಅನಾಹುತಕ್ಕೆ ಮತ್ತೆ 5 ಮಂದಿ ಸಾವು

ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಕಾರಣಗಳಿಗೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ರಾಯಚೂರು, ಕಲಬುರಗಿಗಳಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಹತ್ತಿ, ತೊಗರಿ, ಹೆಸರು, ಸಬಸ್ಸಿಗೆ, ಮೆಂತೆ, ಈರುಳ್ಳಿ, ಬದನೆ, ಮೆಣಸು ಬೆಳೆಗಳು ಹಾನಿಯಾಗಿದೆ.
 

click me!