
ಬೆಂಗಳೂರು(ಆ.04): ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಹಿಳೆ ಸೇರಿ ಒಟ್ಟು 4 ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆ ವರದಿಯಾಗಿದೆ. ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ರಾಯಚೂರು, ಕಲಬುರಗಿಗಳಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಹತ್ತಿ, ತೊಗರಿ, ಹೆಸರು, ಸಬಸ್ಸಿಗೆ, ಮೆಂತೆ, ಈರುಳ್ಳಿ, ಬದನೆ, ಮೆಣಸಿನಕಾಯಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ.
ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಮಧ್ಯ ಕರ್ನಾಟಕದ ಚಿತ್ರದುರ್ಗ, ಹಳೇ ಮೈಸೂರು ಭಾಗದ ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಮಲೆನಾಡು ಭಾಗದ ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಏತನ್ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಡಬ ತಾಲೂಕಿನ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಣೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮೇಘಸ್ಫೋಟ: ಹಳ್ಳದಂತಾದ ರಸ್ತೆಗಳು, ಜನರು ಕಂಗಾಲು.!
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಮಹಿಳೆ ಜೈನಾಬಿ ಸಿಪಾಯಿ(54) ಸಿಡಿಲಿಗೆ ಮೃತಪಟ್ಟಿದ್ದಾರೆ. ಇನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳತೆರೆ ತಾಲೂಕಿನಲ್ಲಿ ಹರಿವ ವೇದಾವತಿ ನದಿಯಲ್ಲಿ ಚೌಳೂರು ಗ್ರಾಮದ ಕುಮಾರ್(35) ಕೊಚ್ಚಿಹೋಗಿದ್ದರೆ, ಕೋಲಾರ ನಗರದ ಕೋಡಿ ಕೊಣ್ಣೂರು ಕೆರೆ ಕೋಡಿ ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ನೌಷಾದ್(16) ಎಂಬ ಬಾಲಕನೊಬ್ಬ ನೀರು ಪಾಲಾಗಿದ್ದಾನೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಬಳಿ ಲಾರಿಯೊಂದು ವೇದಾವತಿ ನದಿಯ ಸೇತುವೆ ದಾಟುವಾಗ ಪಲ್ಟಿಯಾಗಿದ್ದು ಚಾಲಕ ಹುಸೇನ್ ನೀರುಪಾಲಾಗಿದ್ದಾರೆ, ಅಹ್ಮದ್ ಎಂಬವರನ್ನು ರಕ್ಷಿಸಲಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹಳ್ಳಿ ಹೊಸೂರು ಹಳ್ಳದಲ್ಲಿ ಆಟೋರಿಕ್ಷಾ ಒಂದು ಕೊಚ್ಚಿ ಹೋಗಿದ್ದು, ಅದರೊಳಗಿದ್ದ ಮೂವರನ್ನು ಜನರನ್ನು ರಕ್ಷಣೆ ಮಾಡಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಮಣಿ ಮುಕ್ತವಾದಿ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಸೇತುವೆ ಕುಸಿದು ಬೆಂಗಳೂರು-ಹಿಂದೂಪುರ ಹಾಗೂ ಪಾವಗಡ ರಸ್ತೆ ಸಂಪರ್ಕ ಕಡಿತವಾಗಿದೆ. ಬುಧವಾರ ಬೆಳಗ್ಗೆ ಖಾಸಗಿ ಬಸ್ ಹಳ್ಳದ ನೀರಿನಲ್ಲಿ ಸಿಕ್ಕಿ ನಿಂತು ಹೋಗಿತ್ತು. ತಕ್ಷಣವೇ ಗ್ರಾಮಸ್ಥರು ಪ್ರಯಾಣಿಕರನ್ನು ಸುರಕ್ಷಿತವಾಗಿ ನದಿ ದಡಕ್ಕೆ ಸೇರಿಸಿ ರಕ್ಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ