ಮಳೆ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಗರಿಷ್ಠ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಉಷ್ಣ ಮಾರುತ ಭೀತಿ ಶುರುವಾಗಿದೆ.
ಬೆಂಗಳೂರು(ಮಾ.30): ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳ ದಾಖಲೆಯ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ಮುಂದಿನ ಎರಡು ದಿನದಲ್ಲಿ ‘ಉಷ್ಣ ಅಲೆ’ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಿದೆ.
ಮಳೆ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಗರಿಷ್ಠ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಉಷ್ಣ ಮಾರುತ ಭೀತಿ ಶುರುವಾಗಿದೆ.
ಅಥಣಿ: ಬಿಸಿಲಿನ ತಾಪಕ್ಕೆ ಬಸವಳಿದ ಜನತೆ, ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್..!
ಇದೀಗ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನದ ಭಾರೀ ಏರಿಕೆಯ ಮುನ್ಸೂಚನೆ ಲಭ್ಯವಾಗಿದ್ದು, ಶುಕ್ರವಾರ ಬರೋಬ್ಬರಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಐದು ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ಪ್ರಮಾಣದ ಗರಿಷ್ಠ ಉಷ್ಣಾಂಶ ದಾಖಲಾಗಿರಲಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಶುಕ್ರವಾರ ಬೆಂಗಳೂರಿನಲ್ಲಿ ದಾಖಲಾಗಿರುವ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವೂ, ಕಳೆದ 10 ವರ್ಷಗಳಲ್ಲಿ ದಾಖಲಾದ 3ನೇ ಹಾಗೂ 15 ವರ್ಷದಲ್ಲಿ ದಾಖಲಾದ 4ನೇ ಅತೀ ಹೆಚ್ಚು ಉಷ್ಣಾಂಶವಾಗಿದೆ. 1996ರ ಮಾರ್ಚ್ 25ರಂದು 37.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಗಿಂತ 3.3 ಡಿಗ್ರಿ ಹೆಚ್ಚಳ:
ಬೆಂಗಳೂರಿನ ಮಾರ್ಚ್ ತಿಂಗಳ ವಾಡಿಕೆ ಗರಿಷ್ಠ ಉಷ್ಣಾಂಶ 33.1 ಡಿಗ್ರಿ ಸೆಲ್ಸಿಯಸ್ ಇದೆ. ಶುಕ್ರವಾರ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ 3.3 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗಿದೆ. ಏಪ್ರಿಲ್ ನಲ್ಲಿ ವಾಡಿಕೆ ಗರಿಷ್ಠ ಉಷ್ಣಾಂಶದಲ್ಲಿ ಮತ್ತೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದೆ.
7 ಜಿಲ್ಲೆಗಳಲ್ಲಿ ಉಷ್ಣ ಅಲೆ ಭೀತಿ:
ಉತ್ತರ ಒಳನಾಡಿನ ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಆಕಾಶ ಶುಭ್ರವಾಗಿರಲಿದ್ದು, ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದ್ದು, ಈಗಾಗಲೇ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿ ತಲುಪಿದೆ. ಹೀಗಾಗಿ, ಈ ಜಿಲ್ಲೆಗಳಿಗೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮ ಏನು?
ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ಅವಧಿಯಲ್ಲಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಅನಿವಾರ್ಯವಾಗಿ ಹೊರಗೆ ಹೋಗಬೇಕಾದರೆ ತಿಳಿ ಬಣ್ಣದ ಹತ್ತಿ ಉಡುಪು ಧರಿಸಿ, ಬಿಳಿ ಹತ್ತಿ ಬಟ್ಟೆಯಿಂದ ತಲೆ ಮುಚ್ಚಿ, ಕಪ್ಪು ಛತ್ರಿ, ಬಿಳಿ ಟೋಪಿ ಇತ್ಯಾದಿ ಬಳಕೆ ಮಾಡುವುದು. ಹಣ್ಣಿನ ರಸಗಳು ಮತ್ತು ಎಳನೀರು ಸಾಕಷ್ಟು ಕುಡಿಯಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
Drought: ಕರ್ನಾಟಕದಲ್ಲಿ 122 ವರ್ಷಗಳಲ್ಲೇ 3ನೇ ಅತೀ ಭೀಕರ ಬರ! ಮುಂಗಾರು ಮಳೆ ಕೈಕೊಟ್ಟ ಎಫೆಕ್ಟ್ ರಾಜ್ಯಕ್ಕೆ ಬರೆ..!
ಮಹಾರಾಷ್ಟ್ರದಷ್ಟು ತೀಕ್ಷವಾದ ಉಷ್ಣ ಅಲೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಂಡುಬಂದಿಲ್ಲ. ಸಾಧಾರಣವಾದ ಉಷ್ಣ ಅಲೆ ಆಗಿದೆ. ಜನರು ಆತಂಕ ಪಡಬೇಕಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು. ಒಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಜ್ಞ ಎ.ಪ್ರಸಾದ್ ತಿಳಿಸಿದ್ದಾರೆ.
ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿರುವ ಜಿಲ್ಲೆ ವಿವರ (ಮಾ.29): ಜಿಲ್ಲೆ ದಾಖಲಾದ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಎಷ್ಟು ಹೆಚ್ಚು?
ಕಲಬುರಗಿ 41.8 2.2
ಬಾಗಲಕೋಟೆ 40.9 3.5
ರಾಯಚೂರು 40.6 1.4
ವಿಜಯಪುರ 39.0 0.8
ಹಂಪಿ 39.8 2.2
ಬಾದಾಮಿ 40. 3.8
ಬೆಂಗಳೂರು 36. 3.3