
ಬೆಂಗಳೂರು (ಡಿ.15) : ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನವನ್ನು ಸಾಬೀತು ಪಡಿಸಲು ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಹಾಗೂ ಕರೆಗಳ ಮಾಹಿತಿ ಕೇಳುವ ಮೂಲಕ ಆ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ಕೌಟುಂಬಿಕ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಆ ವ್ಯಕ್ತಿಯ ಮೂಲಭೂತ ಹಕ್ಕಿಗೆ ಧಕ್ಕೆ ತರಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ತಮ್ಮ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೂರನೇ ವ್ಯಕ್ತಿ (ಪ್ರಿಯತಮ) ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಮಹತ್ವದ ಆದೇಶ ನೀಡಿದೆ. ಈ ಮೂಲಕ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೋರ್ಟ್ ಆದೇಶ ಪಾಲಿಸದ ತಹಶೀಲ್ದಾರ್‌ಗೆ 3 ಲಕ್ಷ ರು. ದಂಡ
ಪ್ರತಿಯೊಬ್ಬ ಪ್ರಜೆಗೂ ತನ್ನ, ತನ್ನ ಕುಟುಂಬ, ವಿವಾಹ ಮತ್ತು ಇತರೆ ಸಂಬಂಧಗಳ ವಿಚಾರದಲ್ಲಿ ತನ್ನ ಖಾಸಗಿತನವನ್ನು ಕಾಯ್ದುಕೊಳ್ಳುವ ಹಕ್ಕಿದೆ. ಮೊಬೈಲ್ ಮಾಹಿತಿಯೂ ಸಹ ಖಾಸಗಿತನದ ಭಾಗವಾಗಿದೆ. ಆಧಾರ ರಹಿತ ಆರೋಪದ ಆಧಾರದಲ್ಲಿ ಮೂರನೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರಲಾಗದು. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ಊರ್ಜಿತವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ಮೊಬೈಲ್ ಟವರ್ ವಿವರ ಮತ್ತು ಕರೆಗಳ ವಿವರಗಳನ್ನು ನೀಡುವಂತೆ ಆದೇಶಿಸಲಾಗಿದೆ. ಇದೇ ಮೊದಲ ಬಾರಿಗೆ ಅರ್ಜಿದಾರರನ್ನು ಪ್ರಕರಣದಲ್ಲಿ ಎಳೆಯಲಾಗಿದೆ. ಈ ವಿಚಾರಣೆಯಲ್ಲಿ ಆತ ಮೂರನೇ ವ್ಯಕ್ತಿ. ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆನ್ನುವ ಅನುಮಾನ ಸಾಬೀತುಪಡಿಸುವುದಕ್ಕಾಗಿ ಆತನ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ಅದಕ್ಕೆ ಕಾನೂನಿನ ಮನ್ನಣೆ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಕೋರ್ಟ್ ಆದೇಶ ಪಾಲಿಸದ ತಹಶೀಲ್ದಾರ್‌ಗೆ 3 ಲಕ್ಷ ರು. ದಂಡ
ಪ್ರಕರಣದ ಹಿನ್ನೆಲೆ:
38 ವರ್ಷದ ಪತಿ ಹಾಗೂ 36 ವರ್ಷದ ಪತ್ನಿ ನಡುವೆ 2018ರಲ್ಲಿ ಕೌಟುಂಬಿಕ ಕಲಹ ಏರ್ಪಟ್ಟಹಿನ್ನೆಲೆಯಲ್ಲಿ ಪ್ರಕರಣ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಮೂರನೇ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಸಾಬೀತುಪಡಿಸಲು ಆತನ ಮೊಬೈಲ್ ಕರೆ ಮತ್ತು ಟವರ್ ವಿವರಗಳನ್ನು ನೀಡುವಂತೆ ಮೊಬೈಲ್ ಕಂಪನಿಗೆ ನಿರ್ದೇಶನ ನೀಡುವಂತೆ ಅರ್ಜಿ ಹೂಡಿದ್ದರು. ಅದನ್ನು ಮಾನ್ಯ ಮಾಡಿದ್ದ ನ್ಯಾಯಾಲಯ 2019ರ ಫæ.23ರಂದು ಪ್ರಿಯಕರನ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಮೊಬೈಲ್ ಕಂಪನಿಗೆ ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಪ್ರಿಯಕರ ಹೈಕೋರ್ಚ್ ಮೆಟ್ಟಿಲೇರಿದ್ದ. ವಿಚ್ಛೇದನ ಪ್ರಕರಣದಲ್ಲಿ ತಾನು ಪ್ರತಿವಾದಿಯಲ್ಲದಿದ್ದರೂ ಕೋರ್ಚ್ ನನ್ನ ಮೊಬೈಲ್ ಟವರ್ ಮಾಹಿತಿ ಕೇಳಿ ಖಾಸಗಿತನಕ್ಕೆ ಧಕ್ಕೆ ತಂದಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ