
ಬೆಂಗಳೂರು(ಜೂ.13): ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಿದ್ದ ಸರ್ಕಾರದ ಕ್ರಮ ಪುರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ವಿಭಾಗೀಯ ಪೀಠ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ಜು.17ರವರೆಗೆ ತಡೆ ನೀಡಿ ಮಧ್ಯಂತರ ಹೊರಡಿಸಿರುವ ವಿಭಾಗೀಯ ಪೀಠ, ಮೇಲ್ಮನವಿ ಕುರಿತು ಉತ್ತರಿಸುವಂತೆ ಸೂಚಿಸಿ ಸಿಬಿಐ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.
ಮೇಕೆದಾಟು ಪಾದಯಾತ್ರೆ: ಡಿ.ಕೆ.ಶಿವಕುಮಾರ್ ಮೇಲಿನ 1 ಕೇಸ್ ರದ್ದು, 2ಕ್ಕೆ ತಡೆ
ವಿಚಾರಣೆ ವೇಳೆ ಶಿವಕುಮಾರ್ ಪರ ವಕೀಲರು, ಇ.ಡಿ. ಬರೆದ ಪತ್ರದಲ್ಲಿನ ಅಂಶಗಳನ್ನು ಉಲ್ಲೇಖಿಸಿ, ವಿವೇಚನೆ ಬಳಸದೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿಸಿದೆ. ನಂತರ ಅದನ್ನು ಆಧರಿಸಿ ಶಿವಕುಮಾರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಹೀಗಿದ್ದರೂ ಏಕ ಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರದ ಕ್ರಮವನ್ನು ಪುರಸ್ಕರಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ:
ದೆಹಲಿ ಸೇರಿದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದಂತೆ ವಿವಿಧ ಸ್ಥಳಗಳ ಮೇಲೆ 2017ರ ಆ.2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ 8.59 ಕೋಟಿ ರು. ಹಣ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, 2019ರ ಸೆ.3ರಂದು ಶಿವಕುಮಾರ್ ಅವರನ್ನು ಬಂಧಿಸಿತ್ತು. 2019ರ ಸೆ.9ರಂದು ಇ.ಡಿ. ಬರೆದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಸಿಬಿಐಗೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಅನುಮತಿಸಿತ್ತು.
ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್ ಒಪ್ಪಿಗೆ
ಈ ಆದೇಶ ರದ್ದುಪಡಿಸಲು ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜನ್ ಅವರ ಏಕಸದಸ್ಯ ಪೀಠ ವಜಾಗೊಳಿಸಿ 2023ರ ಏ.20ರಂದು ಆದೇಶಿಸಿತ್ತು. ಇದೀಗ ಆ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಡಿ.ಕೆ.ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದಾರೆ.
ಮತ್ತೊಂದೆಡೆ ಸಿಬಿಐ ತನಿಖೆ ರದ್ದುಕೋರಿ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ಗೆ ಮತ್ತೊಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆಗೆ ಹೈಕೋರ್ಚ್ ತಡೆ ಸಹ ನೀಡಿದೆ. ಆ ಅರ್ಜಿಯು ಮತ್ತೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ