ಭ್ರಷ್ಟಾಚಾರ ಕೇಸ್‌: ಮಾಜಿ ಸಚಿವ ರೋಷನ್‌ ಬೇಗ್‌ ಕುಟುಂಬಕ್ಕೆ ಸಂಕಷ್ಟ

Kannadaprabha News   | Asianet News
Published : Nov 06, 2020, 10:08 AM ISTUpdated : Nov 06, 2020, 10:15 AM IST
ಭ್ರಷ್ಟಾಚಾರ ಕೇಸ್‌: ಮಾಜಿ ಸಚಿವ ರೋಷನ್‌ ಬೇಗ್‌ ಕುಟುಂಬಕ್ಕೆ ಸಂಕಷ್ಟ

ಸಾರಾಂಶ

ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ| ರೋಷನ್‌ ಬೇಗ್‌, ಪತ್ನಿ, ಪುತ್ರನ ವಿರುದ್ಧ ವಿಚಾರಣೆ| ರೋಷನ್‌ ಬೇಗ್‌ ಅವರು ಮಾಜಿ ಶಾಸಕರಾಗಿರುವ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ| 

ಬೆಂಗಳೂರು(ನ.06): ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಸಚಿವ ರೋಷನ್‌ ಬೇಗ್‌ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ 2018ರಲ್ಲಿ ತಮಗೆ ಜಾರಿ ಮಾಡಿದ ಸಮನ್ಸ್‌ ರದ್ದುಪಡಿಸುವಂತೆ ಕೋರಿ ರೋಷನ್‌ ಬೇಗ್‌, ಪತ್ನಿ ಸಬಿನಾ ರೋಷನ್‌ ಮತ್ತು ಪುತ್ರ ರುಮನ್‌ ಬೇಗ್‌ ರೆಹಮಾನ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರು ವಜಾಗೊಳಿಸಿ ಆದೇಶಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಆದಾಯ ಮೀರಿದ ಆಸ್ತಿ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದ್ದರೆ ಅದು ಭ್ರಷ್ಟಾಚಾರ ಕಾಯ್ದೆಯಡಿ ಅಪರಾಧವೆನಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಆದರೆ, ಕೇವಲ 56.71 ಲಕ್ಷ ರು. ಆದಾಯ ಮೀರಿ ಆಸ್ತಿಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ ಸಮನ್ಸ್‌ ಜಾರಿ ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನುಬಾಹಿರ. ಮೇಲಾಗಿ ತಮ್ಮ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಆದ್ದರಿಂದ ಪ್ರಕರಣ ಕುರಿತು ವಿಚಾರಣಾ ನ್ಯಾಯಾಲಯದ ವಿಚಾರಣೆ ಮತ್ತು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸಬೇಕೆಂದು ರೋಷನ್‌ ಬೇಗ್‌ ಮತ್ತವರ ಕುಟುಂಬ ಸದಸ್ಯರು ಅರ್ಜಿಯಲ್ಲಿ ಕೋರಿದ್ದರು.

'ಬೇಗ್‌ ವಶಕ್ಕೆ ಪಡೆದು ಎಚ್‌ಡಿಕೆ ಬ್ಲಾಕ್‌ಮೇಲ್‌'

ಅರ್ಜಿದಾರರ ವಾದ ತಿರಸ್ಕರಿಸಿದ ಹೈಕೋರ್ಟ್‌, ರೋಷನ್‌ ಬೇಗ್‌ ಅವರು ಮಾಜಿ ಶಾಸಕರಾಗಿರುವ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಅರ್ಜಿದಾರರು 56.71 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಮಾಹಿತಿ ಲೋಕಾಯುಕ್ತ ಪೊಲೀಸರ ವರದಿಯಲ್ಲಿದೆ. ಆದರೆ, ಆ ಅಕ್ರಮ ಆಸ್ತಿಯ ಮೊತ್ತ ಶೇಕಡ 10ರಷ್ಟಿದೆ ಎಂಬ ಅಭಿಪ್ರಾಯದ ಆಧಾರದಲ್ಲಿ ‘ಬಿ’ ವರದಿ ಸಲ್ಲಿಸಲಾಗಿದೆ. ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಮಾನವನ್ನು ಅದಕ್ಕೆ ಬೆಂಬಲವಾಗಿ ಉಲ್ಲೇಖಿಸಲಾಗಿದೆ. ಆದರೆ, ಸುಪ್ರೀಂಕೋರ್ಟ್‌ ತೀರ್ಮಾನ ಆ ಪ್ರಕರಣಕ್ಕೆ ಸೀಮಿತವಾಗಿದ್ದು, ಎಲ್ಲ ಪ್ರಕರಣಗಳಿಗೂ ಅದನ್ನು ಅನ್ವಯಿಸಲೇಬೇಕೆಂಬ ನಿಯಮವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಆಸ್ತಿಯ ಮೌಲ್ಯ ಮತ್ತು ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ತನಿಖಾಧಿಕಾರಿ ‘ಬಿ’ ವರದಿ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಸಲ್ಲಿಸುವ ‘ಬಿ’ ವರದಿಯನ್ನು ವಿಚಾರಣಾ ನ್ಯಾಯಾಲಯ ಸ್ವೀಕರಿಸುವುದು ಕಡ್ಡಾಯವಲ್ಲ. ಸಕಾರಣ ಇದ್ದರೆ ನ್ಯಾಯಾಲಯ ‘ಬಿ’ ವರದಿಯನ್ನು ತಿರಸ್ಕರಿಸಬಹುದು. ಆದ್ದರಿಂದ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಕೈಗೊಂಡ ಕ್ರಮ ಕಾನೂನಿನ ಪ್ರಕಾರವೇ ಇದೆ ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ