ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ನಕಾರ

By Kannadaprabha NewsFirst Published Jan 22, 2021, 8:31 AM IST
Highlights

ರಾಮಲಿಂಗಮ್‌ ಕಂಪನಿಯಿಂದ ಹಣ ಪಡೆದ ಆರೋಪ|ಎಫ್‌ಐಆರ್‌ ದಾಖಲಾಗದ ಕೇಸು ವರ್ಗಾವಣೆ ಸಾಧ್ಯವಿಲ್ಲ| ಸಿಎಂ ಮಗ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಹಾಗೂ ಕೆಲ ಅಧಿಕಾರಿಕಾರಿಗಳು ರಾಮಲಿಂಗಮ್‌ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ|  

ಬೆಂಗಳೂರು(ಜ.22):  ರಾಮಲಿಂಗಮ್‌ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ ಹಣ ಪಡೆದ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಬಿ.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿ ವಿರುದ್ಧದ ಆರೋಪವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿದೆ. 

ತನ್ಮೂಲಕ ವಿಜಯೇಂದ್ರ ಅವರಿಗೆ ರಿಲೀಫ್‌ ದೊರಕಿದಂತಾಗಿದೆ. ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಆರ್‌. ಐಯ್ಯರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಕುರಿತು ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಎಫ್‌ಐಆರ್‌ ಆಗದ ಯಾವುದೇ ಪ್ರಕರಣದ ತನಿಖೆ ವರ್ಗಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಅರ್ಜಿದಾರರ ಮನವಿಯಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಖಾತೆ ಹಂಚಿಕೆಯಲ್ಲಿ ಸಿಎಂ ಪುತ್ರನ ಪಾತ್ರ: ವಿಜಯೇಂದ್ರ ಪ್ರತಿಕ್ರಿಯೆ ಹೀಗಿದೆ

ಅಲ್ಲದೆ, ಎಫ್‌ಐಆರ್‌ ದಾಖಲಿಸಿಲ್ಲ ಎಂಬ ಬಗ್ಗೆ ಅರ್ಜಿದಾರರು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ನಿಯಮಗಳ ಅನುಸಾರ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅರ್ಜಿ ಸಂಪೂರ್ಣವಾಗಿ ತಪ್ಪು ಕಲ್ಪನೆಯಿಂದ ಕೂಡಿದೆ. ಹೀಗಾಗಿ, ಅದನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿತು.

ಮುಖ್ಯಮಂತ್ರಿಗಳ ಮಗ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಹಾಗೂ ಕೆಲ ಅಧಿಕಾರಿಕಾರಿಗಳು ರಾಮಲಿಂಗಮ್‌ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಸೆ.25ರಂದು ಪೊಲೀಸರಿಗೆ ಹಾಗೂ ಎಸಿಬಿಗೆ ದೂರು ನೀಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
 

click me!