ಬೆದರಿಕೆ ಸಂದೇಶ: ಆರ್‌ಎಸ್‌ಎಸ್‌ ಕಚೇರಿಗಳಿಗೆ ಪೊಲೀಸ್‌ ರಕ್ಷಣೆ: ಗೃಹ ಸಚಿವ ಜ್ಞಾನೇಂದ್ರ

By Kannadaprabha News  |  First Published Jun 8, 2022, 12:00 PM IST

*  ಉತ್ತರಪ್ರದೇಶದ 2, ಕರ್ನಾಟಕದ 4 ಕಚೇರಿ ಧ್ವಂಸಗೊಳಿಸುವ ವಾಟ್ಸಪ್‌ ಸಂದೇಶ ರವಾನೆ
*  ತಮಿಳುನಾಡು ಮೂಲದ ವ್ಯಕ್ತಿಯಿಂದ ಉತ್ತರಪ್ರದೇಶ ವ್ಯಕ್ತಿಗೆ ವಾಟ್ಸಪ್‌ ರವಾನೆಯಾಗಿರುವ ಸಂದೇಶ
*  ಬೆಂಗಳೂರಿನಲ್ಲಿ ಜಮ್ಮು-ಕಾಶ್ಮೀರ ಮೂಲದ ಶಂಕಿತ ಉಗ್ರನ ಬಂಧನ 


ಶಿವಮೊಗ್ಗ(ಜೂ.08):  ಆರ್‌ಎಸ್‌ಎಸ್‌ ಕಚೇರಿ ಮೇಲೆ ದಾಳಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಆರ್‌ಎಸ್‌ಎಸ್‌ ಕಚೇರಿಗಳಿಗೆ ಪೊಲೀಸ್‌ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಎರಡು ಹಾಗೂ ಕರ್ನಾಟಕದ ನಾಲ್ಕು ಆರ್‌ಎಸ್‌ಎಸ್‌ ಕಚೇರಿಗಳನ್ನು ಧ್ವಂಸಗೊಳಿಸುವುದಾಗಿ ವ್ಯಕ್ತಿಯೊಬ್ಬ ತಮಿಳುನಾಡಿನಿಂದ ವಾಟ್ಸಪ್‌ ಸಂದೇಶವೊಂದನ್ನು ಉತ್ತರಪ್ರದೇಶದ ವ್ಯಕ್ತಿಗೆ ಕಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲು ಮಾಡಲಾಗಿದೆ. ಈ ಸಂಬಂಧ ವಾಟ್ಸಪ್‌ ಸಂದೇಶ ಕಳಿಸಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಆರೋಪಿ ಸೆಂಥಿಲ್‌ ಎಂಬವನನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ರೀತಿ ಬೆದರಿಕೆ ಕರೆ ಅಥವಾ ಸಂದೇಶಗಳನ್ನು ಕಳಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Tap to resize

Latest Videos

Karnataka Politics: 'ಹುಚ್ಚರ ಕೂಟದ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ'

ಶಂಕಿತ ಉಗ್ರನ ಬಂಧನ:

ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಜಮ್ಮು-ಕಾಶ್ಮೀರ ಮೂಲದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಜ್ಯದ ಪೊಲೀಸರೂ ಈ ಕುರಿತು ತನಿಖೆ ಆರಂಭಿಸಿದ್ದಾರೆ. ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ಪೊಲೀಸರು, ಜಮ್ಮು-ಕಾಶ್ಮೀರ ರಾಜ್ಯದ ಪೊಲೀಸರ ಜತೆ ಸಮನ್ವಯ ಸಾಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದರು.
ಬಂಧಿತ ಶಂಕಿತ ಉಗ್ರನಿಗೆ ಬೆಂಗಳೂರಿನಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಮೊಬೈಲ್‌ ಫೋನ್‌ ಪಡೆಯಲು ಹಾಗೂ ಇತರ ದಾಖಲೆ ಪಡೆಯಲು ಸ್ಥಳೀಯರು ಸಹಾಯ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜಮ್ಮು- ಕಾಶ್ಮೀರದ ಉಗ್ರನನ್ನು ಪತ್ತೆ ಹಚ್ಚಲು ರಾಜ್ಯದ ಪೊಲೀಸರೂ ಸಹಕರಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ರಾಜ್ಯದ ಪೊಲೀಸರು ಜಮ್ಮು-ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಹೇಳಿದರು.

 

click me!