ಕಳೆದ ವಿಧಾನಸಭೆ ಚುನಾವಣೆ ವೇಳೆ ಏ.19ರಂದು ಶಿಗ್ಗಾಂವಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಜೆ.ಪಿ. ನಡ್ಡಾ ಅವರು, ‘ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಒಲವು ಗಳಿಸಿರಿ. ಕರ್ನಾಟಕ ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ’ ಎಂದು ಹೇಳಿಕೆ ನೀಡಿದ್ದರು.
ಬೆಂಗಳೂರು(ನ.08): ಕಳೆದ ವಿಧಾನಸಭೆ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ ಸಂಬಂಧ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಹಾವೇರಿ ಪ್ರಧಾನ ಸಿವಿಲ್ ನ್ಯಾಯಾಲಯದ ಮುಂದಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ನಡ್ಡಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಏ.19ರಂದು ಶಿಗ್ಗಾಂವಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಜೆ.ಪಿ. ನಡ್ಡಾ ಅವರು, ‘ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಒಲವು ಗಳಿಸಿರಿ. ಕರ್ನಾಟಕ ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ’ ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಅಂದಿನ ಚುನಾವಣಾಧಿಕಾರಿಯಾಗಿದ್ದ ಲಕ್ಷ್ಮಣ್ ನಂದಿ, ‘ಜೆ.ಪಿ. ನಡ್ಡಾ ಅವರು ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ’ ಎಂದು ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಡ್ಡಾ ಹೈಕೋರ್ಟ್ ಮೆಟ್ಟಿಲೇರಿದ್ದರು.