ಬೆಂಗಳೂರು ಗಲಭೆ: ಶಾಸಕ ಅಖಂಡ ಶ್ರೀನಿವಾಸ್‌ಗೆ ಹೈಕೋರ್ಟ್‌ ನೋಟಿಸ್‌

By Kannadaprabha NewsFirst Published Aug 29, 2020, 8:10 AM IST
Highlights

ಡಿ.ಜೆ-ಕೆ.ಜಿ.ಹಳ್ಳಿ ಗಲಭೆ| ಗಲಭೆಕೋರರ ಕೆಂಗಣ್ಣಿಗೆ ಗುರಿಯಾದ ವಾಹನಗಳ ನಷ್ಟ ಅಂದಾಜು ಶುರು| ಬೆಂಕಿಗಾಹುತಿಯಾದ ವಾಹನಗಳ ನಷ್ಟದ ಮೌಲ್ಯಮಾಪನ| ಗಲಭೆಯಲ್ಲಿ ಹಾನಿಯಾದ ವಾಹನಗಳ ಪೈಕಿ ಅತಿ ಹೆಚ್ಚು ಕಸ್ತೂರಿ ನಗರ ಆರ್‌ಟಿಓ ಕಚೇರಿಯಲ್ಲಿ ನೋಂದಣಿ|  

ಬೆಂಗಳೂರು(ಆ.29): ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಅಮೃತೇಶ್‌ ಸಲ್ಲಿಸಿರುವ ಅರ್ಜಿಯಲ್ಲಿ 6ನೇ ಪ್ರತಿವಾದಿಯಾಗಿರುವ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿತು.

ವಿಚಾರಣೆ ವೇಳೆ ವಕೀಲ ಅಮೃತೇಶ್‌ ವಾದ ಮಂಡಿಸಿ, ಆ.11ರಂದು ನಡೆದ ಗಲಭೆಯಲ್ಲಿ ಶಾಸಕರ ಮನೆಗೆ ಹಾನಿ ಮಾಡಲಾಗಿದೆ. ಆದರೆ, ಆ.14ರಂದು ಪೊಲೀಸರಿಗೆ ದೂರು ನೀಡಿರುವ ಶಾಸಕರು ಆ ಬಳಿಕ ಪದೇ ಪದೆ ಪೊಲೀಸ್‌ ಆಯುಕ್ತರ ಕಚೇರಿ, ಪೊಲೀಸ್‌ ಠಾಣೆಗೆ ಭೇಟಿ ನೀಡಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಇದು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಆದ್ದರಿಂದ, ಈ ಕುರಿತು ಅವರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠ, ಶಾಸಕ ಅಖಂಡ ಶ್ರೀನಿವಾಸ್‌ಗೆ ನೋಟಿಸ್‌ ಜಾರಿ ಮಾಡಿತು.

ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ:

ಇದೇ ವೇಳೆ, ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟೀ್ರಯ ತನಿಖಾ ಸಂಸ್ಥೆಗೆ (​ಎನ್‌ಐಎ) ವಹಿಸಲು ನಿರ್ದೇಶಿಸುವಂತೆ ಕೋರಿ ನಗರದ ಗಿರೀಶ್‌ ಭಾರದ್ವಾಜ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್‌, ಸೆ.11ಕ್ಕೆ ವಿಚಾರಣೆ ಮುಂದೂಡಿತು.

ಗಲಭೆಯಲ್ಲಿ ಮನೆ ಕಳೆದುಕೊಂಡ ಶಾಸಕ ಅಖಂಡ ಹೋಟೆಲ್‌ನಲ್ಲಿ!

30 ವಾಹನ ಭಸ್ಮ: 26 ಲಕ್ಷ ರು. ನಷ್ಟ

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ವೇಳೆ ಸುಟ್ಟಿದ್ದ ಹಾಗೂ ಹಾನಿಯಾಗಿದ್ದ ವಾಹನಗಳ ನಷ್ಟದ ಮೌಲ್ಯ ಅಂದಾಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗಲಭೆಯಲ್ಲಿ ನೂರಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಈ ಪೈಕಿ ಯಶವಂತಪುರ ಆರ್‌ಟಿಓ ಕಚೇರಿಯಲ್ಲಿ ನೋಂದಣಿಯಾಗಿದ್ದ 30 ವಾಹನಗಳು ಹಾನಿಗೊಳಗಾಗಿದ್ದು, ಇವುಗಳ ನಷ್ಟದ ಮೌಲ್ಯ .26 ಲಕ್ಷ ಎಂದು ಅಂದಾಜಿಸಲಾಗಿದೆ. 30 ವಾಹನಗಳ ಪೈಕಿ ಐದು ಕಾರು ಹಾಗೂ 16 ದ್ವಿಚಕ್ರವಾಹನಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಉಳಿದ 9 ವಾಹನಗಳು ಜಖಂ ಆಗಿವೆ. ಹೀಗಾಗಿ ಈ ಎಲ್ಲ ವಾಹನಗಳ ನಷ್ಟದ ಮೌಲ್ಯವನ್ನು ಅಂದಾಜಿಸಿ ಆರ್‌ಟಿಓ ಅಧಿಕಾರಿಗಳು ಪೊಲೀಸರಿಗೆ ವರದಿ ನೀಡಿದ್ದಾರೆ.

ವಾಹನದ ಮಾಲೀಕರು ತಮ್ಮ ವಾಹನ ಸುಟ್ಟಿರುವ ಹಾಗೂ ಹಾನಿಯಾಗಿರುವ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಯಶವಂತಪುರ ಆರ್‌ಟಿಓ ಕಚೇರಿಗೆ 30 ವಾಹನಗಳ ನಷ್ಟದ ಮೌಲ್ಯದ ಬಗ್ಗೆ ವರದಿ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಹಿರಿಯ ಮೋಟಾರು ವಾಹನ ನಿರೀಕ್ಷಕ ರಾಜಣ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ತೆರಳಿ ಬೆಂಕಿಗೆ ಆಹುತಿಯಾದ ವಾಹನಗಳು ಹಾಗೂ ಹಾನಿಗೆ ಒಳಗಾದ ವಾಹನಗಳನ್ನು ಪರಿಶೀಲಿಸಿ, ನಷ್ಟದ ಮೌಲ್ಯ ಅಂದಾಜಿಸಿ ವರದಿ ತಯಾರಿಸಿ ಪೊಲೀಸರಿಗೆ ವರದಿ ನೀಡಿದೆ.

ವಿಮೆ ಕ್ಲೈಂಗೆ ಅನುಕೂಲ:

ಆರ್‌ಟಿಓ ವರದಿಯಿಂದ ಮಾಲೀಕರು ತಮ್ಮ ವಾಹನಗಳ ವಿಮೆ ಕ್ಲೈಂ ಮಾಡಲು ಹಾಗೂ ಸಂಪೂರ್ಣ ಸುಟ್ಟಿರುವ ವಾಹನಗಳ ನೋಂದಣಿ ರದ್ದುಗೊಳಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ಈ ಘಟನೆ ಸಂಬಂಧ ಗಲಭೆಕೋರರಿಂದಲೇ ನಷ್ಟದ ಮೊತ್ತ ವಸೂಲಿ ಮಾಡಲು ಸರ್ಕಾರ ತೀರ್ಮಾನಿಸಿರುವುದರಿಂದ ಅನುಕೂಲವಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ದಾಖಲೆ ಇಲ್ಲದವರ ಒದ್ದಾಟ

ವಾಹನ ಹಾನಿಗೆ ಸಂಬಂಧಪಟ್ಟಂತೆ ಕೆಲವರು ಮಾತ್ರ ಪೊಲೀಸರಿಗೆ ದೂರು ನೀಡಿದ್ದು, ವಾಹನದ ದಾಖಲೆಗಳು ಇಲ್ಲದವರು ಯಾವುದೇ ದೂರು ದಾಖಲಿಸಲು ಮುಂದಾಗಿಲ್ಲ. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗದ ಹೊರತು ಆರ್‌ಟಿಓ ಅಧಿಕಾರಿಗಳು ಆ ವಾಹನಗಳ ಮೌಲ್ಯ ಅಂದಾಜಿಸಲು ಅವಕಾಶವಿಲ್ಲ. ಗಲಭೆಯಲ್ಲಿ ಹಾನಿಯಾದ ವಾಹನಗಳ ಪೈಕಿ ಅತಿ ಹೆಚ್ಚು ಕಸ್ತೂರಿ ನಗರ ಆರ್‌ಟಿಓ ಕಚೇರಿಯಲ್ಲಿ ನೋಂದಣಿಯಾಗಿವೆ. ಪೊಲೀಸರ ಪತ್ರ ಆಧರಿಸಿ ಕಸ್ತೂರಿ ನಗರ ಆರ್‌ಟಿಓ ಅಧಿಕಾರಿಗಳೂ ಹಾನಿಯಾದ ವಾಹನಗಳ ನಷ್ಟದ ಮೌಲ್ಯ ಅಂದಾಜಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
 

click me!