
ಬೆಂಗಳೂರು(ಆ.28): ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಅಧಿಕಾರಿಗಳೇ ಸಹಕರಿಸಿದ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ನಗರ ಪೊಲೀಸ್ ಆಯುಕ್ತರು ಹಾಗೂ ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಕೃಷ್ಣರಾಮಯ್ಯ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ನೋಟಿಸ್ ಜಾರಿಗೊಳಿಸಿ, ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಪ್ರಗತಿ ವರದಿ ಸಲ್ಲಿಸಲು ತನಿಖಾಧಿಕಾರಿಗೆ ಸೂಚಿಸಿ ವಿಚಾರಣೆಯನ್ನು ಸೆ.10ಕ್ಕೆ ಮುಂದೂಡಿತು.
ಬೆಂಗಳೂರು ಗಲಭೆ: ಕ್ಲೇಮ್ ಕಮಿಷನರ್ ನೇಮಕಕ್ಕೆ ಹೈಕೋರ್ಟ್‌ಗೆ ಸರ್ಕಾರದ ಅರ್ಜಿ
ವಿಚಾರಣೆ ವೇಳೆ ಆರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮುಳ್ಳೂರು ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಮೀನನ್ನು ತಹಸೀಲ್ದಾರ್ ಮತ್ತಿತರರು ಅಧಿಕಾರಿಗಳು ಸೇರಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ಶಿಸ್ತು ಪ್ರಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರು ದಾಖಲೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಾಗೂ ಅವರನ್ನು ಸೇವೆಯಿಂದ ಅಮಾನತು ಮಾಡಲು ಅದೇಶಿಸಿದ್ದರು. ಅಲ್ಲದೇ ಆರೋಪಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 2019ರ ಡಿ.11ರಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಈವರೆಗೂ ಯಾವುದೇ ತನಿಖೆಯಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, ಆರೋಪಿತ ಅಧಿಕಾರಿಗಳು ಅದೇ ಹುದ್ದೆಯಲ್ಲಿ ಇಂದಿಗೂ ಮುಂದುವರೆಯುತ್ತಿದ್ದು, ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಪ್ರಕರಣದಲ್ಲಿ ಪೊಲೀಸರಿಂದ ಪಾರದರ್ಶಕ ತನಿಖೆ ನಡೆಯುವ ಸಾಧ್ಯತೆಯಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾವಣೆ ಮಾಡಿ, ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ, ಪ್ರಕರಣ ಸಂಬಂಧ ತನಿಖಾಧಿಕಾರಿಗಳ ಬಳಿ ಇರುವ ಎಲ್ಲ ದಾಖಲೆಗಳನ್ನು ನ್ಯಾಯಾಂಗದ ವಶಕ್ಕೆ ಪಡೆಯಬೇಕು ಎಂದು ಕೋರಿದರು.
ಏನಿದು ಪ್ರಕರಣ?
ಮುಳ್ಳೂರು ಗ್ರಾಮದ ಸರ್ವೇ ಸಂಖ್ಯೆ 49, 47, 48, 49/6, 44, 45 ಮತ್ತು 91ರ ಜಮೀನುಗಳನ್ನು ನೋಂದಣಿ ಮಾಡಬಾರದೆಂದು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರಿಗೆ 2019ರ ಅ.11ರಂದು ಪತ್ರ ಬರೆದಿದ್ದರು. ಪತ್ರ ಆಧರಿಸಿ, ಈ ಸರ್ವೇ ನಂಬರ್‌ಗಳ ಜಮೀನು ನೋಂದಣಿ ಮಾಡದಂತೆ ಆಯುಕ್ತರು ಸೂಚಿಸಿದ್ದರು. ಹೀಗಿದ್ದರೂ, ಬಾಣಸವಾಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನು ನೋಂದಣಿ ಮಾಡಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ದಯಾನಂದ ಭಂಡಾರಿ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಉಪ ನೋಂದಣಾಧಿಕಾರಿ ಎಂ.ಕೆ.ಶಾಂತಮೂರ್ತಿ ಹಾಗೂ ಭೂದಾಖಲೆಗಳ ಜಂಟಿ ನಿರ್ದೇಶಕಿ (ಜೆಡಿಎಲ್‌ಆರ್) ಪಿ.ಎಸ್. ಕುಸುಮಲತಾ ಮತ್ತಿತರರ ವಿರುದ್ಧ ದೂರು ಪ್ರಕರಣ ದಾಖಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ