ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಎಸಿಬಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾಗಿ ನ್ಯಾ. ಸಂದೇಶ್ ಉಲ್ಲೇಖಿಸಿದ್ದರು, ಈಗ ಅವರನ್ನೇ ವರ್ಗಾವಣೆ ಮಾಡಿಸಬಹುದು ಎಂದು ಬೆದರಿಕೆ ಬಂದಿದೆ ಎಂದವರು ಹೇಳಿಕೊಂಡಿದ್ದಾರೆ.
ವರದಿ: ರಮೇಶ್ ಕೆ.ಎಚ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳದ (Anti Corruption Bureau) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ (ADGP Seemant Kumar Singh) ಅವರ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಕಿಡಿ ಕಾರಿದ್ದಾರೆ. ಎಸಿಬಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದೆ ನ್ಯಾ. ಸಂದೇಶ್ (High Court Justice HP Sandesh) ಎಸಿಬಿ ಮತ್ತು ಎಸಿಬಿ ಎಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ವಾರೆಂಟ್ ತೋರಿಸಿ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಇಂದು ಇದರ ಹಿನ್ನೆಲೆಯಲ್ಲಿ ಮಾತನಾಡಿದ ಅವರು, "ನನ್ನನ್ನೇ ವರ್ಗಾವಣೆ ಮಾಡುತ್ತೀನಿ ಎಂಬ ಬೆದರಿಕೆ ಬಂದಿದೆ. ನಾನು ಈ ಬೆದರಿಕೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನ್ನನ್ನು ವರ್ಗಾವಣೆ ಮಾಡಲಿ. ಎಸಿಬಿ ಎಡಿಜಿಪಿ ತುಂಬಾ ಪವರ್‌ಫುಲ್ ಆಗಿದ್ದಾರಂತೆ. ಒಬ್ಬ ವ್ಯಕ್ತಿ ಇದನ್ನು ನನಗೆ ತಿಳಿಸಿದ್ಧಾರೆ. ನಾನು ರೈತನ ಮಗ, ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಡುತ್ತೇನೆ. ವರ್ಗಾವಣೆ ಅಥವಾ ನನ್ನ ಜವಾಬ್ದಾರಿಯಿಂದ ತೆಗೆದರೆ, ನಾನು ಉಳುಮೆ ಮಾಡಲೂ ಸಿದ್ಧನಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿಲ್ಲ," ಎಂದು ಎಚ್ ಪಿ ಸಂದೇಶ್ ಬೆಂಗಳೂರು ನಗರ ಡಿಸಿ ಲಂಚ ಪ್ರಕರಣದ ವಿಚಾರಣೆ ವೇಳೆ ಹೇಳಿದ್ದಾರೆ.
ವಿಚಾರಣೆ ವೇಳೆ ಮಾತು ಮುಂದುವರೆಸಿದ ನ್ಯಾಯಮೂರ್ತಿಗಳು, "2ನೇ ಆರೋಪಿಯನ್ನು ಕಲೆಕ್ಷನ್‌ಗೋಸ್ಕರವೇ ನೇಮಿಸಲಾಗಿದೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತೀರಿ. ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್ ಗಳ ಮಾಹಿತಿ ಕೇಳಿದರೆ, ಮಾಹಿತಿ ನೀಡುತ್ತಿಲ್ಲ ಎಂದು ಎಸಿಬಿ ವಕೀಲರ ತರಾಟೆ ತೆಗೆದುಕೊಂಡರು. ವಿಭಾಗೀಯ ಪೀಠಕ್ಕೆ ನೀಡಿದ ಮಾಹಿತಿ ನನಗೇಕೆ ನೀಡುತ್ತಿಲ್ಲ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನಾ? ಕರಿ ಕೋಟ್ ಇರುವುದು ಆರೋಪಿಗಳನ್ನು ರಕ್ಷಿಸಲಿಕ್ಕಲ್ಲ, ಭ್ರಷ್ಟಾಚಾರ ಕ್ಯಾನ್ಸರ್ ಆಗಿದೆ 4ನೇ ಹಂತಕ್ಕೆ ಹೋಗಬಾರದು. ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು? ಸರ್ಚ್ ವಾರೆಂಟ್ ತೋರಿಸಿ ವಸೂಲಿ ಮಾಡೋದು ನಡೀತಿದೆ. ಎಸಿಬಿಯ ಎಡಿಜಿಪಿ ಸರ್ವಿಸ್ ರೆಕಾರ್ಡ್ ಅನ್ನೂ ಹಾಜರುಪಡಿಸಿಲ್ಲ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ನನಗೆ ಯಾರ ಹೆದರಿಕೆ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಜಡ್ಜ್ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ," ಎಂದು ನ್ಯಾ. ಸಂದೇಶ್ ಹೇಳಿದ್ದಾರೆ.
ಮುಂದುವರೆದ ಅವರು ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ ಮತ್ತು ವಿಟಮಿನ್ ಎಂ (ದುಡ್ಡು) ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ ಎಂದು ಎಸಿಬಿಗೆ ಛೀಮಾರಿ ಹಾಕಿದ್ದಾರೆ. ದುಡ್ಡು ತಗೊಂಡು ಪೋಸ್ಟಿಂಗ್ ಕೊಡೋದು ನಿಲ್ಲಿಸಿದರೆ ಎಲ್ಲ ಸರಿಹೋಗುತ್ತದೆ. ಭ್ರಷ್ಟಾಚಾರದಲ್ಲಿ ರಾಜ್ಯವೇ ಹತ್ತಿ ಉರಿಯುತ್ತಿದೆ, ಎಸಿಬಿ ಏನು ಮಾಡ್ತಿದೆ, ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: PSI Recruitment Scam: ಅಕ್ರಮ ನೇಮಕಾತಿ ಪ್ರಕರಣ, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನ
ಎಸಿಬಿ ವಿರುದ್ಧ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಆಕ್ರೋಶ:
"ಎಸಿಬಿ ಕಚೇರಿಗಳು ಕಲೆಕ್ಷನ್ ಸೆಂಟರ್ ಗಳಂತಾಗಿವೆ ಎಂದು ಎಸಿಬಿಗೆ ಹೈಕೋರ್ಟ್ ಏಕಸದಸ್ಯ ಪೀಠ ತೀವ್ರ ತರಾಟೆ ತೆಗೆದುಕೊಂಡಿದೆ. ಎಸಿಬಿ ಎಡಿಜಿಪಿಯೇ ಕಳಂಕಿತ ಅಧಿಕಾರಿಯಾಗಿದ್ದಾರೆ. ಎಸಿಬಿ ಎಡಿಜಿಪಿ ಮೇಲೆಯೇ ಆರೋಪಗಳಿವೆ. ಹೀಗಿರುವಾಗ ಎಸಿಬಿಯಿಂದ ಪ್ರಾಮಾಣಿಕ ಕೆಲಸ ಸಾಧ್ಯವೇ," ಎಂದು ನ್ಯಾ.ಹೆಚ್.ಪಿ.ಸಂದೇಶ್ ರವರಿದ್ದ ಹೈಕೋರ್ಟ್ ಪೀಠ ತರಾಟೆ. ಎಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದೀರಿ. ದೊಡ್ಡ ಅಧಿಕಾರಿಗಳನ್ನು ಬಿಟ್ಟು ಬಾಲಂಗೋಚಿಗಳನ್ನು ಹಿಡಿಯುತ್ತೀರಿ. ಎಷ್ಟು ಟ್ರಾಪ್ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದೀರಿ. ಎಷ್ಟು ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಿದ್ದೀರಿ. ಜು. 4 ರಂದು ಮಾಹಿತಿ ನೀಡಲು ಎಸಿಬಿ ವಕೀಲರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬೆಟ್ಟಿಂಗ್ ದಂಧೆಯ ಕರಾಳ ರೂಪ ದರ್ಶನ: ಹಣಕ್ಕಾಗಿ ಹೆಂಡತಿಯನ್ನೇ ಕೊಂದನಾ ಗಂಡ?
ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ದಾಳಿಯಾಗಿತ್ತು, ಜಾಮೀನು ಕೋರಿ ಉಪ ತಹಸೀಲ್ದಾರ್ ಮಹೇಶ್ ಪಿ.ಎಸ್. ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಈಗಾಗಲೇ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಹೈಕೋರ್ಟ್ ಸಿಐಡಿ ಮುಖ್ಯಸ್ಥ ಪಿಎಸ್ ಸಂಧು ಅವರನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಈ ಬಂಧನವಾಗಿದೆ. ಈಗ ಹೈಕೋರ್ಟ್ ಎಸಿಬಿಯ ಮೇಲೆ ಕೆಂಡಾಮಂಡಲವಾಗಿದ್ದು, ಬೆಂಗಳೂರು ನಗರ ಡಿಸಿ ಬಂಧನವಾಗುತ್ತಾರ ಎಂಬುದನ್ನು ಕಾದು ನೋಡಬೇಕು.