ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದು ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

By Kannadaprabha News  |  First Published Jun 29, 2022, 5:45 AM IST

*  13 ಮುಖಂಡರ ವಿರುದ್ಧದ ಆರೋಪಪಟ್ಟಿಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ
*  ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಮೇಕೆದಾಟು ಯೋಜನೆಗೆ ಪಾದಯಾತ್ರೆ 
*  ಪಾದಯಾತ್ರೆ ನಡೆಸಲು ಸರ್ಕಾರಿ ಪ್ರಾಧಿಕಾರಗಳೇ ಅನುಮತಿ ನೀಡಿರುವುದಕ್ಕೆ ದಾಖಲೆಗಳು ಇವೆ 


ಬೆಂಗಳೂರು(ಜೂ.29):  ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ 13 ಮುಖಂಡರ ವಿರುದ್ಧ ರಾಮನಗರ ಗ್ರಾಮೀಣ ಠಾಣಾ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ 13 ಮಂದಿ ಮುಖಂಡರು ಹೈಕೋರ್ಟ್‌ಗೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿಗೆ ತಡೆಯಾಜ್ಞೆ ನೀಡಿದೆ. ಜತೆಗೆ, ತನಿಖೆ ನಡೆಸಿದ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿರುವ ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ದೂರುದಾರ ರಾಮನಗರ ತಹಸೀಲ್ದಾರ್‌ ವಿಜಯ್‌ಕುಮಾರ್‌ಗೆ ನೋಟಿಸ್‌ ಜಾರಿಗೊಳಿಸಿದೆ.

Tap to resize

Latest Videos

ಸಿದ್ದರಾಮಯ್ಯಗೆ ಸಮನ್ಸ್, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಸೂಕ್ತ ನೋಟಿಫಿಕೇಶನ್‌ ಇರಲಿಲ್ಲ:

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಿ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ನಿಯಮಗಳನ್ನು ಸೂಕ್ತ ನೋಟಿಫಿಕೇಷನ್‌ ಹೊರಡಿಸದೆ ಜಾರಿಗೊಳಿಸಲು ಅವಕಾಶವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಜಾರಿ ಮಾಡಲಾಗಿದ್ದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಮತ್ತೊಂದೆಡೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಅರ್ಜಿದಾರರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ, ಪಾದಯಾತ್ರೆ ನಡೆಸಲು ಸರ್ಕಾರಿ ಪ್ರಾಧಿಕಾರಗಳೇ ಅನುಮತಿ ನೀಡಿರುವುದಕ್ಕೆ ಹಲವು ದಾಖಲೆಗಳು ಇವೆ. ಹೀಗಿದ್ದರೂ ಪಾದಯಾತ್ರೆ ನಡೆಸುವ ಮೂಲಕ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ಅರ್ಜಿದಾರರ ದೋಷಾರೋಪ ಪಟ್ಟಿಸಲ್ಲಿಸಿರುವುದು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದ ಪರಿಗಣಿಸಿದ ನ್ಯಾಯಯಪೀಠ ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿಗೆ ತಡೆಯಾಜ್ಞೆ ನೀಡಿದೆ.

ಕೋವಿಡ್‌ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ: ಕೋರ್ಟ್‌ಗೆ ಡಿಕೆಶಿ ಹಾಜರು

ಪ್ರಕರಣದ ವಿವರ:

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ 2022ರ ಜ.9ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್‌ ಜ.13ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಪೊಲೀಸರು, ಫೆ.9ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕಾಂಗ್ರೆಸ್‌ ಮುಖಂಡರಾದ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಧೃವನಾರಾಯಣ, ಟಿ.ಬಿ. ಜಯಚಂದ್ರ, ಎಚ್‌.ಆಂಜನೇಯ, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ಅಂಜಲಿ ನಿಂಬಾಳ್ಕರ್‌, ಸಲೀಂ ಅಹ್ಮದ್‌, ಕೆ. ರಾಜು, ಡಾ.ರವೀಂದ್ರ, ಕುಸುಮಾ ಮತ್ತು ಪಾರ್ವತಮ್ಮ ಅವರು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌, ದೋಷಾರೋಪ ಪಟ್ಟಿಮತ್ತು ನಗರದ 42ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ)ದಲ್ಲಿ ಬಾಕಿಯಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದಾರೆ.
 

click me!