
ಬೆಂಗಳೂರು(ಏ.30): ಲಾಕ್‌ಡೌನ್ ಅವಧಿ ನಡುವೆಯೂ ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ… ವಿವಾಹ ಸಮಾರಂಭ ಸಂಬಂಧ ಎಷ್ಟುವಾಹನ ಪಾಸ್ ನೀಡಲಾಗಿತ್ತು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಮುಂಜಾಗ್ರತೆ ಕ್ರಮಕೈಗೊಳ್ಳುವ ಕುರಿತು ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಮದುವೆಯಲ್ಲಿ ಹೇಗೆ ರೆಡಿಯಾಗಿದ್ರು ನೋಡಿ!
ವಿಚಾರಣೆ ವೇಳೆ ವಕೀಲ ಜಿ.ಆರ್.ಮೋಹನ್ ವಾದಿಸಿ, ಲಾಕ್‌ಡೌನ್ ಸಂಬಂಧ ಕೇಂದ್ರ ಸರ್ಕಾರ ಮಾ.24 ಮತ್ತು ಏ.15ರಂದು ಹೊರಡಿಸಿದ ಮಾರ್ಗಸೂಚಿಗಳನ್ವಯ ಮದುವೆ ಸಮಾರಂಭ ನಡೆಸುವಂತಿಲ್ಲ. ಏ.17ರಂದು ನಿಖಿಲ… ಮದುವೆ ಸಮಾರಂಭ ನಡೆದಿದ್ದು, ಸರ್ಕಾರ ಸಾಕಷ್ಟುವಾಹನ ಪಾಸ್‌ಗಳನ್ನು ನೀಡಿದೆ. ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಸರ್ಕಾರ ನೀಡಿದ ವಾಹನಗಳ ಪಾಸ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಚಿವರು ಸಾರ್ವಜನಿಕರಿಗೆ ಆಹಾರ ಕಿಟ್ ಕೊಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ನಿಖಿಲ್ ಮದ್ವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದವರ ಬಾಯಿಗೆ ಸಿಎಂ ಬೀಗ
ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ನಿಖಿಲ್ ವಿವಾಹದಲ್ಲಿ ಎಷ್ಟುಜನ ಭಾಗವಹಿಸಿದ್ದರು, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತೇ, ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಏ.21ರಂದೇ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ, ಸರ್ಕಾರ ಇನ್ನೂ ವರದಿ ಸಲ್ಲಿಸಿಲ್ಲ. ಅಲ್ಲದೆ, ನಿಖಿಲ್ ಮದುವೆ ಸಮಾರಂಭ ಸಂಬಂಧ ಎಷ್ಟುವಾಹನ ಪಾಸ್ ನೀಡಲಾಗಿದೆ, ವಾಹನ ಪಾಸ್‌ಗಳ ದುರ್ಬಳಕೆ ಸಂಬಂಧ ಹಲವು ದೂರು ಬಂದಿದೆ. ಅವುಗಳ ಸಂಬಂಧ ಯಾವ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಮೇ 5ರಂದು ಲಿಖಿತವಾಗಿ ವರದಿ ಸಲ್ಲಿಸಿ’ ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ