ಬೆಂಗಳೂರಲ್ಲಿ ನಿನ್ನೆ ದಾಖಲೆ ಮಳೆ| ಒಂದೇ ದಿನ 11 ಸೆಂ.ಮೀ ವರ್ಷಧಾರೆ, ಇದು ಏಪ್ರಿಲ್‌ನ ಸಾರ್ವಕಾಲಿಕ ದಾಖಲೆ| ನಿನ್ನೆ ಮಳೆಗೆ ರಾಜಧಾನಿ ತತ್ತರ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಏ.30): ಬಿರುಬೇಸಿಗೆಯಲ್ಲೇ ವರುಣದೇವನು ಮಳೆಗಾಲದಂತೆ ಅಬ್ಬರಿಸಲು ಆರಂಭಿಸಿದ್ದಾನೆ. ಬೆಂಗಳೂರಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸುಮಾರು ಮೂರೂವರೆ ಗಂಟೆ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಏಪ್ರಿಲ್ ಮಾಸದಲ್ಲಿ ನಗರದಲ್ಲಿ ಸುರಿದ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ.
ಹೀಗಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಿಕರಿಸಿದೆ. 2011ರ ಏ.23 ರಂದು ನಗರದಲ್ಲಿ 103 ಮಿ.ಮೀ ಮಳೆಯಾಗಿತ್ತು. ಅದು, ಈವರೆಗೆ ಏಪ್ರಿಲ್ ತಿಂಗಳಿನಲ್ಲಿ ಸುರಿದ ಭಾರೀ ಮತ್ತು ಅತಿ ಹೆಚ್ಚಿನ ಪ್ರಮಾಣ ಮಳೆ ಎಂಬ ಹೆಗ್ಗಳಿಕೆ ಪಾತ್ರವಾಗಿ ಸಾರ್ವಕಾಲಿಕ ದಾಖಲೆಯಾಗಿ ಉಳಿದಿತ್ತು. ಇದೀಗ ಬುಧವಾರ ಬೆಳಗಿನ ಜಾವ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಆ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಲಾಕ್‌ಡೌನ್ ಕಮಾಲ್, ಈಗ ಸಹಾರನ್ಪುರದಿಂದ್ಲೂ ಕಾಣಿಸ್ತಿದೆ ಹಿಮಾಚಲ ಪರ್ವತ!
ಬುಧವಾರ ಬೆಳಗ್ಗೆ ಕೇವಲ ಮೂರುವರೆ ತಾಸಿನಲ್ಲಿ ಸುರಿದ ಧಾರಾಕಾರ ಮಳೆ ಆ ದಾಖಲೆಯನ್ನು ಮುರಿದಿದ್ದು, ಬೆಂಗಳೂರಿನ ಹುಸ್ಕೂರಿನಲ್ಲಿ 110 ಮಿ.ಮೀ ಮಳೆಯಾದ ವರದಿಯಾಗಿದೆ. ಇದೀಗ ಬೆಂಗಳೂರು ನಗರದಲ್ಲಿ ಏಪ್ರಿಲ್ ತಿಂಗಳಲ್ಲಿ ಸುರಿದ ಅತ್ಯಧಿಕ ಮಳೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಸಾರ್ವಕಾಲಿಕ ದಾಖಲೆ:
2011ರ ಏ.23ಕ್ಕೂ ಹಿಂದೆ 1971ರ ಏ.17 ರಂದು ಬೆಂಗಳೂರು ನಗರದಲ್ಲಿ 64.5 ಮಿ.ಮೀ ಮಳೆಯಾಗಿತ್ತು. 2011ರ ಏಪ್ರಿಲ್ ವರೆಗೆ ಅದುವೇ ಸಾರ್ವಕಾಲಿಕ ದಾಖಲೆಯ ಮಳೆ ಎಂದು ಪರಿಗಣಿಸಲಾಗಿತ್ತು. 2011ರ ಏ.23ರಂದು 103 ಮಿ.ಮೀ ಸುರಿಯುವ ಮೂಲಕ 1971ರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಯಾಗಿತ್ತು. ಇದೀಗ 2011ರ ದಾಖಲೆಯನ್ನು ಬುಧವಾರದ ಮಳೆ ಮೀರಿಸಿದೆ.
ಕೋಲಾರದಲ್ಲಿ ಮಳೆ: ಟೊಮೆಟೊ, ಕ್ಯಾಪ್ಸಿಕಂಗೆ ಹಾನಿ, ಕೆಜಿ ಗಾತ್ರದ ಆಲಿಕಲ್ಲು
ಸರಾಸರಿ 48 ಮಿ.ಮೀ ಮಳೆ
ಬೆಂಗಳೂರು ನಗರದಲ್ಲಿ ವಾಡಿಕೆಯಂತೆ ಬುಧವಾರ ಕೇವಲ 1 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ಬರೋಬ್ಬರಿ 48 ಮಿ.ಮೀ ನಗರದಲ್ಲಿ ಮಳೆಯಾಗಿದೆ. ವಾಡಿಕೆ ಪ್ರಮಾಣಕ್ಕಿಂತ ಶೇ.4281ರಷ್ಟುಅಧಿಕ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.