KAS ನೇಮಕ ಲೋಪ: ಸರಿಪಡಿಸದಿದ್ರೆ KPSC ವಿರುದ್ಧ ನ್ಯಾಯಾಂಗ ನಿಂದನೆ

By Kannadaprabha News  |  First Published Dec 4, 2020, 8:28 AM IST

ಶುಕ್ರವಾರ ಮಧ್ಯಾಹ್ನದ ತನಕ ಗಡುವು| 1998ರ ಬ್ಯಾಚ್‌ ಕೇಸು: 2016ರ ತೀರ್ಪು ಪಾಲಿಸದ ಕೆಪಿಎಸ್‌ಸಿ| ಆಕ್ಷೇಪಿಸಲಾಗಿದ್ದ 91 ಉತ್ತರ ಪತ್ರಿಕೆಗಳ ಮೌಲ್ಯಮಾಪನಗಳ ಅಂಕಗಳನ್ನು ಆಧರಿಸಿ ಅರ್ಹ ಅಭ್ಯರ್ಥಿಗಳನ್ನು ಸೇವೆಗೆ ಪರಿಗಣಿಸುವಂತೆ ಹೈಕೋರ್ಟ್‌ ಹೇಳಿದೆ| 


ಬೆಂಗಳೂರು(ಡಿ.03): 1998ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕ ಸಂಬಂಧ ನ್ಯಾಯಾಲಯ 2016ರಲ್ಲಿ ನೀಡಿದ ತೀರ್ಪು ಪಾಲನೆಯಲ್ಲಿ ಆಗಿರುವ ಲೋಪವನ್ನು ಶುಕ್ರವಾರ ಮಧ್ಯಾಹ್ನದೊಳಗೆ ಸರಿಪಡಿಸಿ ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನಿರ್ದೇಶಿಸಿರುವ ಹೈಕೋರ್ಟ್‌, ತಪ್ಪಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿದೆ. 

ನ್ಯಾಯಾಲಯದ 2016ರ ತೀರ್ಪು ಪಾಲನೆಯಲ್ಲಿ ಕೆಪಿಎಸ್‌ಸಿ ಲೋಪವೆಸಗಿದೆ ಎಂದು ಆಕ್ಷೇಪಿಸಿ ಚನ್ನಪ್ಪ ಹಾಗೂ ಕೆ. ರೂಪಶ್ರೀ ಮತ್ತಿತರರ ಅಭ್ಯರ್ಥಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿದೆ.

Latest Videos

undefined

ಐಸಿಎಸ್‌ಐ, ಎಸ್‌ಎಸ್‌ಸಿ ಪರೀಕ್ಷೆ ದಿನವೇ ಕೆಪಿಎಸ್ಸಿ ಪರೀಕ್ಷೆ

ಇದಕ್ಕೂ ಮುನ್ನ ಹೈಕೋರ್ಟ್‌ ನಿರ್ದೇಶನದಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ಬುಧವಾರ ವಿಚಾರಣೆಗೆ ಖುದ್ದು ಹಾಜರಿದ್ದರು. ಆ ವೇಳೆ ಕೆಪಿಎಸ್‌ಸಿ ಆಯೋಗದ ಪರ ವಕೀಲರು, 2016ರಲ್ಲಿ ವಿಭಾಗೀಯ ಪೀಠ ನೀಡಿದ್ದ ನಿರ್ದೇಶನ ಗೊಂದಲದಿಂದ ಕೂಡಿತ್ತು. ಈ ಬಗ್ಗೆ ಬಗ್ಗೆ ಸ್ಪಷ್ಟನೆ ಕೋರಿದರೂ ನ್ಯಾಯಾಲಯ ಮತ್ತೆ ವಿವರಣೆ ನೀಡಿಲ್ಲ. ನ್ಯಾಯಾಲಯದ ಆದೇಶದಂತೆ ಆಯೋಗ ಹೊಸದಾಗಿ 91 ಅಭ್ಯರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಆಯೋಗದಿಂದ ಲೋಪವಾಗಿಲ್ಲ ಎಂದು ಸಮಜಾಯಿಸಿ ನೀಡಿದರು.

ಆ ವಾದ ಒಪ್ಪದ ನ್ಯಾಯಪೀಠ, ಆಕ್ಷೇಪಿಸಲಾಗಿದ್ದ 91 ಉತ್ತರ ಪತ್ರಿಕೆಗಳ ಮೌಲ್ಯಮಾಪನಗಳ ಅಂಕಗಳನ್ನು ಆಧರಿಸಿ ಅರ್ಹ ಅಭ್ಯರ್ಥಿಗಳನ್ನು ಸೇವೆಗೆ ಪರಿಗಣಿಸುವಂತೆ ಹೈಕೋರ್ಟ್‌ ಹೇಳಿದೆ. ಆದರೆ ಆಯೋಗ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಗಣಿಸಿದೆ. ಆಯೋಗಕ್ಕೆ ಗೊಂದಲವಿದ್ದರೆ ಸ್ಪಷ್ಟನೆ ಪಡೆಯಬಹುದಿತ್ತು. ಅದು ಬಿಟ್ಟು ನ್ಯಾಯಾಲಯದ ನಿರ್ದೇಶನವನ್ನು ನಿಮಗೆ ಬೇಕಾದಂತೆ ಅರ್ಥೈಸಿಕೊಂಡು ಜಾರಿಗೊಳಿಸಲಾಗಿದೆ. ಆ ಮೂಲಕ ಕಾರ್ಯದರ್ಶಿಯನ್ನು ಬಲಿಪಶು ಮಾಡಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನದೊಳಗೆ ಆಗಿರುವ ಲೋಪ ಸರಿಪಡಿಸಬೇಕು. ಇಲ್ಲವಾದರೆ ಈಗಾಗಲೇ ನ್ಯಾಯಾಂಗ ನಿಂದನೆಯು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಕಾರ್ಯದರ್ಶಿ ವಿರುದ್ಧ ದೋಷಾರೋಪ ನಿಗದಿಪಡಿಸಲಾಗುವುದು ಎಂದು ಕೆಪಿಎಸ್‌ಸಿ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
 

click me!