ಪುನರ್‌ ನೇಮಕ: KSRTC ಡ್ರೈವರ್‌, ಕಂಡಕ್ಟರ್‌ ಬೇರೆ ಘಟಕಕ್ಕೆ ನೇಮಕ

By Kannadaprabha NewsFirst Published Dec 4, 2020, 8:14 AM IST
Highlights

ಹೆಚ್ಚಾದ ಗೈರು ಹಾಜರಿ ಶಿಸ್ತು ಪ್ರಕರಣಗಳು| ವರದಿ ಮಾಡಿಕೊಂಡ ಪ್ರಕರಣಗಳಲ್ಲಿ ತಿಂಗಳಲ್ಲಿ 10-15 ದಿನ ಕರ್ತವ್ಯ ನಿರ್ವಹಿಸಿ, ಉಳಿದ ದಿನಗಳು ಗೈರು ಹಾಜರಿ| ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ| 

ಬೆಂಗಳೂರು(ಡಿ.03): ಹೈಕೋರ್ಟ್‌ ಅಥವಾ ಅಪೀಲು ಪ್ರಾಧಿಕಾರದ ಸೂಚನೆ ಮೇರೆಗೆ ಸೇವೆಗೆ ಪುನರ್‌ ನೇಮಕವಾಗುವ ಚಾಲಕರು ಹಾಗೂ ನಿರ್ವಾಹಕರನ್ನು ವಜಾಕ್ಕೂ ಮುನ್ನ ಕಾರ್ಯನಿರ್ವಹಿಸುತ್ತಿದ್ದ ವಿಭಾಗದ ಘಟಕ ಹೊರತುಪಡಿಸಿ, ಅದೇ ವಿಭಾಗದ ಬೇರೆ ಘಟಕಕ್ಕೆ ಸೇವೆಗೆ ನಿಯೋಜಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪುನರ್‌ ನೇಮಕಗೊಳ್ಳುವ ಚಾಲನಾ ಸಿಬ್ಬಂದಿಯನ್ನು ಬೇರೆ ವಿಭಾಗಗಳಿಗೆ ನಿಯೋಜಿಸುತ್ತಿರುವುದರಿಂದ ಕೆಲವರು ಆ ವಿಭಾಗಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಗೈರು ಹಾಜರಾಗುವುದು, ತಡವಾಗಿ ವರದಿ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದರಿಂದ ಗೈರು ಹಾಜರಿ ಶಿಸ್ತು ಪ್ರಕರಣಗಳು ಹೆಚ್ಚಾಗಿವೆ. ಅಂತೆಯೆ ಬೇರೆ ವಿಭಾಗಗಳಿಗೆ ನಿಯೋಜಿತರಾದ ಸಿಬ್ಬಂದಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ತಮಗೆ ಅನುಕೂಲವಾಗಿರುವ ವಿಭಾಗಕ್ಕೆ ವರ್ಗಾ ಮಾಡಿಸಿಕೊಳ್ಳಲು ಮನವಿ ಸಲ್ಲಿಸುತ್ತಿದ್ದಾರೆ.

ಗುಡ್ ನ್ಯೂಸ್ : KSRTC ಪ್ರಯಾಣ ದರ ಭರ್ಜರಿ ಇಳಿಕೆ

ಇನ್ನು ವರದಿ ಮಾಡಿಕೊಂಡ ಪ್ರಕರಣಗಳಲ್ಲಿ ತಿಂಗಳಲ್ಲಿ 10-15 ದಿನ ಕರ್ತವ್ಯ ನಿರ್ವಹಿಸಿ, ಉಳಿದ ದಿನಗಳು ಗೈರು ಹಾಜರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪುನರ್‌ ನೇಮಕ ಸಿಬ್ಬಂದಿಯನ್ನು ವಜಾಗೊಳ್ಳುವಾಗ ಅಥವಾ ಅಮಾನತಾದಾಗ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವಿಭಾಗದ ಘಟಕ ಹೊರತುಪಡಿಸಿ, ಅದೇ ವಿಭಾಗದ ಬೇರೆ ಘಟಕಕ್ಕೆ ನಿಯೋಜಿಸುವಂತೆ ಸೂಚಿಸಿದ್ದಾರೆ.

ಅಸಾಧಾರಣ ಕೆಂಪು ಗುರುತಿನ ಪ್ರಕರಣ ಪರಿಷ್ಕರಣೆ

ಚಾಲಕ ಕ್ಯಾಬಿನ್‌ನಲ್ಲಿ ಕೊಂಡೊಯ್ಯವ ಸಣ್ಣ ಲಗೇಜ್‌ಗಳು ಹಾಗೂ ಬಾಕ್ಸ್‌ಗಳನ್ನು ಎಷ್ಟುಯೂನಿಟ್‌ ಎಂದು ನಮೂದಿಸದೆ ಅನಧಿಕೃತ ಲಗೇಜು ಸಾಗಣೆ ಎಂದು ಪರಿಗಣಿಸಿ ಅಸಾಧಾರಣ ಕೆಂಪು ಗುರುತಿನ ಪ್ರಕರಣ ದಾಖಲಿಸಲಾಗುತ್ತಿದೆ. ಹೀಗಾಗಿ ಇದನ್ನು ಪರಿಷ್ಕರಿಸುವ ಅಗತ್ಯವಿದೆ. ಹೀಗಾಗಿ ತನಿಖಾ ಸಮಯದಲ್ಲಿ ಸೋರಿಕೆ ಮೊತ್ತ 150 ರು. ಮೀರಿದರೆ ಅಸಾಧಾರಣ ಕೆಂಪು ಗುರುತಿನ ಪ್ರಕರಣ ಎಂದು ಪರಿಗಣಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
 

click me!