
ಬೆಂಗಳೂರು (ಮೇ.8): ಪಾಕಿಸ್ತಾನಕ್ಕೆ ತೆರಳಲು ಮೇ 15ರವರೆಗೆ ಕಾಲಾವಕಾಶ ಕೋರಿ ಮೂವರು ಪಾಕಿಸ್ತಾನಿ ಮಕ್ಕಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಬೀಬಿ ಯಮೀನಾ, ಮುಹಮ್ಮದ್ ಮುದಸ್ಸಿರ್, ಮತ್ತು ಮುಹಮ್ಮದ್ ಯೂಸುಫ್ ಎಂಬ ಮಕ್ಕಳ ಪರವಾಗಿ ಅವರ ತಾಯಿ ರಾಂಷಾ ಜಹಾನ್ ಅರ್ಜಿ ಸಲ್ಲಿಸಿದ್ದರು.
ರಾಂಷಾ ಜಹಾನ್, ಮೈಸೂರಿನವರಾಗಿದ್ದು, ಪಾಕಿಸ್ತಾನಿ ಮುಹಮ್ಮದ್ ಫಾರೂಕ್ ಅವರನ್ನು 2015ರ ಸೆಪ್ಟೆಂಬರ್ 9ರಂದು ಪಾಕಿಸ್ತಾನದ ಪಿಶಿನ್‌ನಲ್ಲಿ ಷರಿಯತ್ ಕಾನೂನಿನಂತೆ ವಿವಾಹವಾಗಿದ್ದರು. ಈ ದಂಪತಿಗೆ ಜನಿಸಿದ ಮೂವರು ಮಕ್ಕಳು ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ. ಆದರೆ ರಾಂಷಾ ಜಹಾನ್ ಪಾಕಿಸ್ತಾನಿ ಪೌರತ್ವ ಪಡೆದಿರಲಿಲ್ಲ.
2025ರ ಜನವರಿ 4ರಂದು ವೀಸಾ ಪಡೆದು ರಾಂಷಾ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಜೂನ್ 18ರವರೆಗೆ ಭಾರತದಲ್ಲಿ ಉಳಿಯಲು ಅನುಮತಿಸಿದ್ದ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಏಪ್ರಿಲ್ 30ರ ಒಳಗೆ ದೇಶ ತೊರೆಯುವಂತೆ ಸೂಚಿಸಿತ್ತು. ಈ ಆದೇಶದಂತೆ ಮಕ್ಕಳೊಂದಿಗೆ ಅಟ್ಟಾರಿ ಗಡಿಗೆ ತೆರಳಿದ್ದ ರಾಂಷಾ, ಮಕ್ಕಳನ್ನು ಕರೆದೊಯ್ಯಲು ತಂದೆ ಗಡಿಗೆ ಆಗಮಿಸದ ಕಾರಣ ಮೈಸೂರಿಗೆ ವಾಪಸಾಗಿದ್ದರು.
ಇದನ್ನೂ ಓದಿ: ಪಾಕಿಸ್ತಾನಿ ಗಂಡನ ಫೋನ್ ಸ್ವಿಚ್ ಆಪ್, ಗಡಿಯಿಂದ ಮೈಸೂರಿಗೆ ಮರಳಿದ ಮಹಿಳೆ! ಮಕ್ಕಳ ಗತಿಯೇನು
ಬಲವಂತದ ಕ್ರಮದ ಭೀತಿಯಿಂದ ಮಕ್ಕಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಮೇ 15ರವರೆಗೆ ವೀಸಾ ವಿಸ್ತರಣೆ ಕೋರಿದ್ದರು. ಆದರೆ, ದೇಶದ ಹಿತಾಸಕ್ತಿ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 28ರ ಒಳಗೆ ದೇಶ ತೊರೆಯುವಂತೆ ಆದೇಶಿಸಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ಜಿ. ಉಮಾ ಅವರ ರಜಾಕಾಲೀನ ಏಕಸದಸ್ಯ ಪೀಠ ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದೆ. ಕರ್ನಾಟಕ ಹೈಕೋರ್ಟ್‌ನ ಈ ಆದೇಶವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ